ಗದಗ: ಬಡ್ಡಿ ದಂಧೆಕೋರರಿಗೆ ಎಷ್ಟೇ ಕಡಿವಾಣ ಹಾಕಲಾಗಿದೆ ಎಂದು ಸರ್ಕಾರ ಹೇಳಿದರೂ ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಅಮಾಯಕರು ಬಲಿಯಾಗುತ್ತಲೇ ಇದ್ದಾರೆ. ಬಡ್ಡಿ ದಂಧೆ ಕೋರರ ಕಿರುಕುಳ, ಬೆದರಿಕೆಗೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗದಗ ನಗರದ ಕರೆಮ್ಮಕಲ್ಲು ಬಡಾವಣೆಯಲ್ಲಿ ಸಂಪತ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಾಪಾರಿ ಧರ್ಮೇಗೌಡ ಎಂಬಾತ ಕಿರುಕುಳ ನೀಡಿ ಧಮ್ಕಿ ಹಾಅಕುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಧರ್ಮೇಗೌಡ ಹಾಗೂ ಇನ್ನೋರ್ವ ರವಿ ಶಿವನಗುತ್ತಿ ಎಂಬುವವರು ನಿತ್ಯವೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಶಿವನಗುತ್ತಿ, ಸಂಪತ್ ಗೆ ಕರೆ ಮಾಡಿ ಪತ್ನಿ ಹೆಸರಲ್ಲಿ ಚೆಕ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಮನನೊಂದು ಸಂಪತ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತ್ನಿ ಹಾಗೂ ತಂದೆ-ತಾಯಿ ಕಣ್ಣೀರಿಟ್ಟಿದ್ದಾರೆ.
ಗದಗ ನಗರದ ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

