ಲಂಡನ್: ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ತಮ್ಮ ವಿಭಿನ್ನ ಫ್ಯಾಷನ್ ಸೆನ್ಸ್ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಲಂಡನ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ವೀಕ್ಷಿಸಲು ಆಗಮಿಸಿದ್ದ ನಟಿ, ತಮ್ಮ ಕ್ಲಾಸಿಕ್ ಲುಕ್ನಿಂದ ಕ್ರೀಡಾಂಗಣದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದ್ದಾರೆ. ಕೇವಲ ಫ್ಯಾಷನ್ ಮಾತ್ರವಲ್ಲದೆ ಪಂದ್ಯದ ನಡುವೆ ಅವರು ಮಾಡಿದ ಒಂದು ಪ್ರೀತಿಯ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕೊಕೊ ಗೌಫ್ ಮತ್ತು ಕ್ಯಾರೋಲಿನಾ ಮುಚೋವಾ ನಡುವಿನ ರೋಚಕ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಪ್ರಿಯಾಂಕಾ ಚೋಪ್ರಾ ಆಗಮಿಸಿದ್ದರು. ಈ ವೇಳೆ ಅವರು ಧರಿಸಿದ್ದ ತಿಳಿ ಕ್ರೀಮ್ ಬಣ್ಣದ ಮಿಡಿ ಡ್ರೆಸ್ ಪ್ರೇಕ್ಷಕರನ್ನು ಆಕರ್ಷಿಸಿತು. ಕಾಲರ್ ನೆಕ್ಲೈನ್ ಮತ್ತು ಆಕರ್ಷಕ ವಿನ್ಯಾಸದ ಈ ಬೇಸಿಗೆ ಉಡುಪಿಗೆ ಮ್ಯಾಚ್ ಆಗುವಂತೆ ಅವರು ತಲೆಗೆ ಧರಿಸಿದ್ದ ಸಿಲ್ಕ್ ಸ್ಕಾರ್ಫ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಇದರೊಂದಿಗೆ ಕಣ್ಣಿಗೆ ಸನ್ ಗ್ಲಾಸ್ ಹಾಗೂ ಸಿಂಪಲ್ ಕಿವಿಯೋಲೆಗಳನ್ನು ಧರಿಸಿ ವಿಂಬಲ್ಡನ್ ಅಂಗಳದಲ್ಲಿ ಅತ್ಯಂತ ಸರಳ ಹಾಗೂ ಸುಂದರವಾಗಿ ಕಾಣಿಸಿಕೊಂಡರು.
ಪಂದ್ಯದ ನಡುವೆ ಪತಿಗೆ ಫೇಸ್ಟೈಮ್ ಕಾಲ್
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕ್ರೀಡಾಂಗಣದ ರಾಯಲ್ ಬಾಕ್ಸ್ನಲ್ಲಿ ಕುಳಿತು ಪಂದ್ಯವನ್ನು ಆಸ್ವಾದಿಸುತ್ತಿರುವಾಗಲೇ ತಮ್ಮ ಪತಿ, ಪಾಪ್ ಗಾಯಕ ನಿಕ್ ಜೋನಸ್ ಅವರಿಗೆ ಫೇಸ್ಟೈಮ್ ಮೂಲಕ ವಿಡಿಯೋ ಕಾಲ್ ಮಾಡಿದ್ದಾರೆ. ಲಂಡನ್ ಟೆನಿಸ್ ಅಂಗಳದ ಅದ್ಭುತ ವಾತಾವರಣವನ್ನು ದೂರದಲ್ಲಿರುವ ಪತಿಗೂ ತೋರಿಸಲು ಪ್ರಿಯಾಂಕಾ ಈ ರೀತಿ ವಿಡಿಯೋ ಕಾಲ್ ಮಾಡಿದ್ದು, ನೆಟ್ಟಿಗರ ಮನ ಗೆದ್ದಿದೆ. ಈ ಜೋಡಿಯ ಪ್ರೀತಿಯ ಕ್ಷಣದ ಫೋಟೋಗಳು ಸದ್ಯ ಇಂಟರ್ನೆಟ್ನಲ್ಲಿ ಸಖತ್ ಸೌಂಡ್ ಮಾಡುತ್ತಿವೆ.
ಈ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಖ್ಯಾತ ಹಾಲಿವುಡ್ ನಟಿಯರಾದ ಸಿಂಥಿಯಾ ಎರಿವೋ ಮತ್ತು ಲಿಲಿ ಜೇಮ್ಸ್ ಕೂಡ ಜೊತೆಯಾಗಿ ಕುಳಿತು ಟೆನಿಸ್ ಪಂದ್ಯವನ್ನು ವೀಕ್ಷಿಸಿದರು. ವಿಶ್ವದ ಅತ್ಯಂತ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಸೆಲೆಬ್ರಿಟಿಗಳ ಈ ಹಾಜರಾತಿ ಮತ್ತು ಪ್ರಿಯಾಂಕಾ ಅವರ ಹೊಸ ಸ್ಟೈಲ್ ಈಗ ಸಿನಿಮಾ ಹಾಗೂ ಕ್ರೀಡಾ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

