ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ ಅವರ ಜನಪ್ರಿಯತೆ ಎರಡು ದಶಕಗಳ ಸಿನಿ ಪಯಣದ ಬಳಿಕವೂ ಅಷ್ಟೇ ಗಟ್ಟಿಯಾಗಿದೆ. ಸ್ಟಾರ್ ನಟರ ಜೊತೆಗೆ ಅಭಿನಯಿಸುವುದಷ್ಟೇ ಅಲ್ಲದೆ, ಮಹಿಳಾ ಪ್ರಧಾನ ಚಿತ್ರಗಳ ಮೂಲಕವೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಇತ್ತೀಚೆಗೆ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರದ ಯಶಸ್ಸಿನ ಬಳಿಕ ಇದೀಗ ಕನ್ನಡದ ಸ್ಟಾರ್ ನಟ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಈ ಚಿತ್ರದಲ್ಲಿ ನಯನತಾರ ಅವರ ಪಾತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ವ್ಯಕ್ತವಾಗಿದ್ದು, ಅವರು ಪಡೆದಿರುವ ಸಂಭಾವನೆಯೂ ಸಿನಿ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಟಾಕ್ಸಿಕ್’ ಮೇಲೆ ಭಾರೀ ನಿರೀಕ್ಷೆ
ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರವು ದೇಶಾದ್ಯಂತ ಸಿನಿಪ್ರಿಯರಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಕಥೆ, ಬಜೆಟ್, ಲುಕ್ಗಳು ಮಾತ್ರವಲ್ಲದೆ, ಚಿತ್ರದ ತಾರಾಗಣದ ಸಂಭಾವನೆಯೂ ಗಮನ ಸೆಳೆಯುತ್ತಿದೆ. ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಕಳೆದ ವಾರ ನಾಯಕಿಯರ ಟೀಸರ್ ಬಿಡುಗಡೆಯಾಗಿದ್ದರೆ, ಇತ್ತೀಚೆಗೆ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ರೊಮ್ಯಾಂಟಿಕ್ ಹಾಡಿನ ವಿಡಿಯೊ ಬಿಡುಗಡೆಯಾಗಿದೆ.
ನಯನತಾರ ಸಂಭಾವನೆ ಎಷ್ಟು?
ಸಿನಿ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ‘ಟಾಕ್ಸಿಕ್’ ಚಿತ್ರಕ್ಕಾಗಿ ನಯನತಾರ ಮೊದಲಿಗೆ 18 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ನಿರ್ಮಾಪಕರೊಂದಿಗೆ ನಡೆದ ಮಾತುಕತೆಯ ನಂತರ 12 ಕೋಟಿ ರೂಪಾಯಿಗೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಉದ್ಯಮದ ಮೂಲಗಳ ಪ್ರಕಾರ, ಅವರು 12 ರಿಂದ 15 ಕೋಟಿ ರೂಪಾಯಿ ನಡುವಿನ ಸಂಭಾವನೆ ಪಡೆದಿರಬಹುದು ಎಂದು ಹೇಳಲಾಗುತ್ತಿದೆ.
ಯಶ್ ಅತಿ ಹೆಚ್ಚು ಸಂಭಾವನೆ
ಸಿನಿ ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿರುವ ನಟ ಯಶ್. ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಅವರಿಗೆ 50 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತರ ಕಲಾವಿದರ ಸಂಭಾವನೆ
• ಕಿಯಾರಾ ಅಡ್ವಾಣಿ – ಸುಮಾರು 15 ಕೋಟಿ ರೂ.
• ರುಕ್ಮಿಣಿ ವಸಂತ್ – ಸುಮಾರು 3 ರಿಂದ 5 ಕೋಟಿ ರೂ.
• ತಾರಾ ಸುತಾರಿಯಾ – ಸುಮಾರು 2 ಕೋಟಿ ರೂ.
• ಹುಮಾ ಖುರೇಶಿ – ಸುಮಾರು 2 ಕೋಟಿ ರೂ.
ಈ ಸಂಭಾವನೆಗಳ ಕುರಿತ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ ಈ ಎಲ್ಲ ಅಂಕಿಅಂಶಗಳಿಗೂ ಚಿತ್ರತಂಡದಿಂದ ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಬಿಡುಗಡೆಗೂ ಮುನ್ನವೇ ಭಾರೀ ಬಜೆಟ್, ತಾರಾಗಣ ಮತ್ತು ಸಂಭಾವನೆ ವಿಚಾರಗಳಿಂದ ಸುದ್ದಿಯಲ್ಲಿರುವ ‘ಟಾಕ್ಸಿಕ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಾವ ಮಟ್ಟದ ಯಶಸ್ಸು ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಯಶ್ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಏನಿದೆ ವಿಶೇಷ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ‘ಕೆಜಿಎಫ್’ ಸರಣಿಯ ಬಳಿಕ ಯಶ್ ನಟಿಸುತ್ತಿರುವ ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿದ್ದು, ಭಾರೀ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ.
ಈ ಚಿತ್ರದಲ್ಲಿ ಯಶ್ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದು, ಪ್ರಮುಖ ಪಾತ್ರಗಳಲ್ಲಿ ನಯನತಾರ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪ್ರಚಾರ ವಿಡಿಯೊಗಳಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
‘ಟಾಕ್ಸಿಕ್’ ಒಂದು ಪಿರಿಯಡ್ ಗ್ಯಾಂಗ್ಸ್ಟರ್ ಆಕ್ಷನ್ ಡ್ರಾಮಾ. ಗೋವಾದ ಹಿನ್ನೆಲೆಯಲ್ಲಿರುವ ಕಥೆಯಲ್ಲಿ ಅಪರಾಧ ಜಗತ್ತು, ಅಧಿಕಾರದ ಪೈಪೋಟಿ ಮತ್ತು ಭಾವನಾತ್ಮಕ ಸಂಘರ್ಷಗಳನ್ನು ಒಳಗೊಂಡಿರುವ ಕಥಾಹಂದರ ಇರಲಿದೆ ಎಂದು ವರದಿಗಳು ತಿಳಿಸಿವೆ. ಚಿತ್ರದ ದೃಶ್ಯ ವೈಭವ, ಆಕ್ಷನ್ ಹಾಗೂ ಸಂಗೀತದ ಮೇಲೂ ಚಿತ್ರತಂಡ ವಿಶೇಷ ಗಮನ ಹರಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ‘ತಬಾಹಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ ಸಿನಿಪ್ರಿಯರ ಗಮನ ಸೆಳೆದಿದೆ. ಚಿತ್ರದ ಪ್ರಚಾರ ಕಾರ್ಯ ಈಗ ವೇಗ ಪಡೆದುಕೊಂಡಿದೆ. ಬಿಡುಗಡೆ ದಿನಾಂಕದಲ್ಲಿ ಹಲವು ಬಾರಿ ಬದಲಾವಣೆಗಳಾದ ಬಳಿಕ, ಚಿತ್ರವನ್ನು ಆಗಸ್ಟ್ 26, 2026ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರ ಸಂಪೂರ್ಣವಾಗಿ ಸಿದ್ಧವಾದ ಬಳಿಕವೇ ಪ್ರೇಕ್ಷಕರ ಮುಂದೆ ತರಬೇಕೆಂಬ ಉದ್ದೇಶದಿಂದ ಬಿಡುಗಡೆ ಮುಂದೂಡಲಾಗಿದೆ ಎಂದು ನಟಿ ಹುಮಾ ಖುರೇಷಿ ತಿಳಿಸಿದ್ದಾರೆ. ‘ಕೆಜಿಎಫ್’ ನಂತರ ಯಶ್ ಯಾವ ರೀತಿಯ ಹೊಸ ಲೋಕವನ್ನು ಕಟ್ಟಿಕೊಡಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಭಾರೀ ತಾರಾಗಣ, ಅದ್ಧೂರಿ ನಿರ್ಮಾಣ ಹಾಗೂ ವಿಭಿನ್ನ ಕಥಾಹಂದರದಿಂದ ‘ಟಾಕ್ಸಿಕ್’ ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

