ರಿಯಾದ್: ವಿಶ್ವದಲ್ಲಿ ಅತಿ ದೊಡ್ಡ ಕಚ್ಚಾತೈಲ ರಫ್ತುದಾರ ದೇಶಗಳಲ್ಲಿ ಒಂದಾದ ಸೌದಿ ಅರೇಬಿಯಾ ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆಯಲ್ಲಿ 11 ಡಾಲರ್ ಇಳಿಕೆ ಮಾಡುವುದಾಗಿ ಘೋಷಿಸಿದೆ.
ಏಷ್ಯಾದ ದೇಶಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಕಚ್ಚಾತೈಲ ಪೂರೈಕೆ ಮಾಡಲು ಸೌದಿ ಅರೇಬಿಯಾ ನಿರ್ಧರಿಸಿದ್ದು, ಆಗಸ್ಟ್ ನಿಂದ ಪರಿಷ್ಕೃತ ದರ ಜಾರಿಗೆ ಬರಲಿವೆ. ಇದು ಕಳೆದ 26 ವರ್ಷಗಳಲ್ಲಿಯೇ ಅತ್ಯಧಿಕ ದರ ಇಳಿಕೆಯಾಗಿದ್ದು, ಇದರ ಬೆನ್ನಲ್ಲಿಯೇ ಭಾರತದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ.
ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ಸಂಸ್ಥೆ ಸೌದಿ ಅರಾಮ್ಕೊ ಪ್ರಮುಖ ಅರಬ್ ಲೈಟ್ ಕಚ್ಚಾತೈಲದ ಅಧಿಕೃತ ಮಾರಾಟ ದರವನ್ನು ಹಾಲಿ ಇರುವ ಬ್ಯಾರೆಲ್ ಗೆ 71 ಡಾಲರ್ ನಿಂದ 60 ಡಾಲರ್ ಗೆ ಇಳಿಕೆ ಮಾಡಲಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಶಮನವಾಗಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ತೈಲ ತುಂಬಿದ ಹಡಗುಗಳ ಸಂಚಾರಕ್ಕೆ ಇದ್ದ ತೊಡಕು ನಿವಾರಣೆಯಾಗಿದೆ. ಸಂಘರ್ಷದ ಸಮಯದಲ್ಲಿ ಭಾರತ ಸೇರಿದಂತೆ ಏಷ್ಯಾ ದೇಶಗಳು ಕಚ್ಚಾತೈಲ ಪೂರೈಕೆಗೆ ಬೇರೆ ಮಾರ್ಗ ಹುಡುಕಿಕೊಂಡಿದ್ದವು. ಈಗ ಎಲ್ಲವೂ ಸುಗಮವಾಗಿದೆ. ಸ್ಪರ್ಧಾತ್ಮಕತೆ ಉಳಿಸಿಕೊಳ್ಳಲು ಬೆಲೆ ಇಳಿಕೆ ಮೊರೆ ಹೋದ ಸೌದಿ ಅರೇಬಿಯಾದ ಸೌದಿ ಅರಾಮ್ಕೋ ಜುಲೈ ತಿಂಗಳಿನಲ್ಲಿಯೂ ಪ್ರತಿ ಬ್ಯಾರಲ್ ಗೆ 6 ಡಾಲರ್ ನಷ್ಟು ಬೆಲೆ ಕಡಿತ ಮಾಡಿತ್ತು.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ದೀರ್ಘಾವಧಿಗೆ ಕಡಿಮೆ ಬೆಲೆಯಲ್ಲಿ ಮುಂದುವರೆದರೆ ರಿಟೇಲ್ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಕೆ ಮಾಡುವ ಸಾಧ್ಯತೆ ಇದೆ. ರಿಟೇಲ್ ಗ್ರಾಹಕರಿಗೆ ಕಚ್ಚಾತೈಲ ದರ ಇಳಿಕೆ ಲಾಭ ವರ್ಗಾಯಿಸಿದರೆ ಜನಸಾಮಾನ್ಯರ ಮೇಲೆ ಇಂಧನ ಹೊರೆ ಕಡಿಮೆಯಾಗಲಿದೆ. ಸರಕು ಸಾಗಾಣೆ ವೆಚ್ಚ ಕೂಡ ಇಳಿಕೆಯಾಗಿ ಹಣದುಬ್ಬರ ಕೂಡ ಇಳಿಮುಖವಾಗುತ್ತದೆ.

