HomeKarnatakaವಿವಿಧ ಕಾರಣಗಳಿಂದ ಬಿಪಿಎಲ್ ಕಾರ್ಡ್ ರದ್ದಾದವರಿಗೆ ಗುಡ್ ನ್ಯೂಸ್: ಮತ್ತೆ ಬಿಪಿಎಲ್ ಪಡಿತರ ಚೀಟಿ ಪಡೆಯಲು...

ವಿವಿಧ ಕಾರಣಗಳಿಂದ ಬಿಪಿಎಲ್ ಕಾರ್ಡ್ ರದ್ದಾದವರಿಗೆ ಗುಡ್ ನ್ಯೂಸ್: ಮತ್ತೆ ಬಿಪಿಎಲ್ ಪಡಿತರ ಚೀಟಿ ಪಡೆಯಲು ಅವಕಾಶ

ಶಿವಮೊಗ್ಗ: ವಿವಿಧ ಕಾರಣಗಳಿಂದಾಗಿ ರದ್ದಾಗಿ, ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತನೆಗೊಂಡಿದ್ದ ಬಿಪಿಎಲ್ ಪಡಿತರ ಚೀಟಿಗಳನ್ನು ಅರ್ಹರು ಪುನಃ ಪಡೆದುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅನ್ನಭಾಗ್ಯ ಯೋಜನೆ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಾನಾ ಕಾರಣಗಳಿಂದ ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತನೆಯಾದವರಿಗೆ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಈ ಹಿಂದೆ ನೀಡಲಾಗಿದ್ದ 45 ದಿನಗಳ ಕಾಲಮಿತಿಯನ್ನು ಸರ್ಕಾರ ರದ್ದುಗೊಳಿಸಿದ್ದು, ಅರ್ಹರು ಯಾವುದೇ ಗಡುವಿನ ಆತಂಕವಿಲ್ಲದೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ ಎಂದರು.

 ಈ ಹಿಂದೆ ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಪಡೆಯಲು ಕೇವಲ 45 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಈ ಗಡುವು ಮುಗಿದಿದ್ದರಿಂದ ರಾಜ್ಯದ ಲಕ್ಷಾಂತರ ಬಡ ಹಾಗೂ ಅರ್ಹ ಕುಟುಂಬಗಳಿಗೆ ತೀವ್ರ ಅನಾನುಕೂಲವಾಗಿತ್ತು. ಯಾವುದೇ ಒಬ್ಬ ಅರ್ಹ ಫಲಾನುಭವಿಯೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದಾತ್ತ ಉದ್ದೇಶದಿಂದ, ರಾಜ್ಯ ಸರ್ಕಾರವು 45 ದಿನಗಳ ನಿಗದಿತ ಗಡುವಿನ ನಿಯಮವನ್ನು ಸಂಪೂರ್ಣವಾಗಿ ರದ್ದುಪಡಿಸಿ ಹೊಸ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಹ ಫಲಾನುಭವಿಗಳಿಗೆ ಸೂಚನೆ: ವಿವಿಧ ಕಾರಣಗಳಿಂದ ಬಿಪಿಎಲ್‌ ನಿಂದ ಎಪಿಎಲ್ ಕಾರ್ಡ್ ಆಗಿ ಬದಲಾಗಿರುವ ಕಾರ್ಡುದಾರರು, ತಮ್ಮ ವ್ಯಾಪ್ತಿಯ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಪುನಃ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಪರಿಶೀಲಿಸಿದ ನಂತರ ಎಪಿಎಲ್ ಕಾರ್ಡ್ ಗಳು ಮತ್ತೆ ಬಿಪಿಎಲ್ ಕಾರ್ಡ್ ಗಳಾಗಿ ಸಕ್ರಿಯಗೊಳ್ಳಲಿವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಮುಕ್ತ ಅವಕಾಶ ನೀಡಿದೆ.

ಕುಟುಂಬ ದತ್ತಾಂಶದ (ಫ್ಯಾಮಿಲಿ ಡೇಟಾ) ಆಧಾರದ ಮೇಲೆ ರಾಜ್ಯಾದ್ಯಂತ ವಿವಿಧ ಕಾರಣಗಳಿಂದ ಸುಮಾರು 4 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ ಗಳಾಗಿ ವರ್ಗಾಯಿಸಲಾಗಿತ್ತು. ಇದರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು 13,641 ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದವು. ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ಬಡ ಕುಟುಂಬಗಳ ಪಡಿತರ ಚೀಟಿಗಳಿಗೆ ಈಗ ಮತ್ತೆ ಮರುಜೀವ ಬಂದಿದ್ದು, ಅರ್ಹ ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ತಹಶೀಲ್ದಾರ್ ಕಚೇರಿ ಸಂಪರ್ಕಿಸಿ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧ್ಯಕ್ಷರು ಸಾರ್ವಜನಿಕರಲ್ಲಿ ಮನವಿ ಮಾಡಿದರು

ಸಭೆಯಲ್ಲಿ ಸದಸ್ಯರು ಮಾತನಾಡಿ, ಅರ್ಹತೆ ಇರುವ ಫಲಾನುಭವಿಗಳ ಅರ್ಜಿಗಳನ್ನು ಪುನಃ ಪರಿಶೀಲಿಸಿ ಬಿಪಿಎಲ್ ಕಾರ್ಡ್ ನೀಡುವ ಮೂಲಕ ಅನುಕೂಲ ಮಾಡುವಂತೆ ತಿಳಿಸಿದರು.

ಸದಸ್ಯರಾದ ನಾಗರಾಜಗೌಡ ಮಾತನಾಡಿ, ಬಡ ಪೋಷಕರ ಮಗ ಕೆಲಸ ಪಡೆದು ವೇತನ ಪಡೆಯುತ್ತಿದ್ದ ಹಾಗೆಯೇ ಬಿಪಿಎಲ್ ಸೌಲಭ್ಯ ನಿಂತು, ಪೋಷಕರಿಗೆ ಪಡಿತರ, ಆರೋಗ್ಯ ಈ ರೀತಿ ಯಾವ ಸೌಲಭ್ಯಗಳು ದೊರೆಯದಾಗುತ್ತದೆ. ಈ ಕಡೆ ಮಗನ ಜೊತೆಯೂ ತಂದೆ-ತಾಯಿ ಇರಲು ಆಗದೇ ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಇಂತಹ ಕಾರ್ಡುಗಳ ಬಗ್ಗೆ ಮರುಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಸದಸ್ಯರಾದ ಶಿವಾನಂದ್ ಮಾತನಾಡಿ, ಜಿಲ್ಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಸರ್ಕಾರದ ಸುತ್ತೋಲೆಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳದೇ ಹಾಗೂ ಸದರಿ ಸುತ್ತೋಲೆ ಬಗ್ಗೆ ಸ್ಪಷ್ಟೀಕರಣ ಪಡೆಯದೇ ಎಸ್‌ಸಿ/ಎಸ್‌ಟಿ ಎಲ್ಲ ಫಲಾನುಭವಿಗಳು ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಅನಾವಶ್ಯಕ ಗೊಂದಲ ಸೃಷ್ಟಿಸಿ ತೊಂದರೆ ನೀಡಿದ್ದಾರೆ ಎಂದರು.

ಅಧ್ಯಕ್ಷರು ಹಾಗೂ ಇತರೆ ಸದಸ್ಯರು ಇನ್ನು ಮುಂದೆ ಆದೇಶ, ಸುತ್ತೋಲೆಗಳನ್ನು ಸರಿಯಾಗಿ ಓದಿ ಜಾರಿಗೆ ತರಬೇಕು. ಪುನಃ ತಪ್ಪಾಗದಂತೆ ಕ್ರಮ ವಹಿಸಬೇಕು ಹಾಗೂ ಈ ಬಗ್ಗೆ ರಾಜ್ಯ ಪ್ರಾಧಿಕಾರಕ್ಕೆ ಪತ್ರ ಬರೆದು ಲಿಖಿತವಾಗಿ ಸ್ಪಷ್ಟೀಕರಣ ಪಡೆದು ನೀಡುವಂತೆ ಸೂಚಿಸಿದರು.

ಹಾಗೂ ಪ್ರಸ್ತುತ ನ್ಯಾಯಬೆಲೆ ಅಂಗಡಿಗಳ ಜಾಗೃತಿ ಸಮಿತಿಗಳನ್ನು ರದ್ದುಗೊಳಿಸಿ, ಪ್ರಾಧಿಕಾರದ ಶಿಫಾರಸಿನ ಅನ್ವಯ ಹೊಸ ಸಮಿತಿಗಳನ್ನು ರಚಿಸಿ ಸಕ್ರಿಯಗೊಳಿಸಬೇಕು. ಮತ್ತು ಆಹಾರ ಇಲಾಖೆಯು ತಾಲ್ಲೂಕುಗಳಲ್ಲಿ ಜಾಗೃತಿ ಸಮಿತಿ ಸಭೆ ಕರೆಯಬೇಕೆಂದು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶಿವಣ್ಣ, ಇಕ್ಕೇರಿ ರಮೇಶ್, ಸದಸ್ಯರಾದ ಅಮೀರ್ ಅಮ್ಜಾ, ಭವ್ಯ ಕೃಷ್ಣಮೂರ್ತಿ, ಅರ್ಚನಾ, ನವುಲೇಶ್, ಹೆಚ್.ಎಂ. ಮಧು, ಹೆಚ್.ಬಿ. ಚದಂಬರ, ಎನ್.ಜಿ. ಶಚೀಂದ್ರ ಹೆಗಡೆ, ಶಿವಾನಂದ, ಎಸ್.ಪಿ. ನಾಗನಗೌಡ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸತೀಶ್, ಸಹಾಯಕ ನಿರ್ದೇಶಕಿ ಲಕ್ಷ್ಮಿ, ಆಹಾರ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular