ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮೆನೇಯಿ ಅವರ ಸಾರ್ವಜನಿಕ ಅಂತಿಮ ದರ್ಶನ ಕಾರ್ಯಕ್ರಮದ ವೇಳೆ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಆಕ್ರೋಶದ ಘೋಷಣೆಗಳು ಮೊಳಗಿದವು. ಟೆಹ್ರಾನ್‌ನ ಇಮಾಮ್ ಖೊಮೇನಿ ಗ್ರ್ಯಾಂಡ್ ಮೊಸಲ್ಲಾದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು “ಅಮೆರಿಕಕ್ಕೆ ಸಾವು”, “ಇಸ್ರೇಲ್‌ಗೆ ಸಾವು”, “ಟ್ರಂಪ್ ಮತ್ತು ಬಿಬಿಯನ್ನು ಕೊಲ್ಲಿರಿ” ಎಂಬ ಘೋಷಣೆಗಳನ್ನು ಕೂಗಿದರು.
ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆ ಕಾರ್ಯಕ್ರಮ ತಡವಾಗಿ ಆಯೋಜಿಸಲಾಗಿತ್ತು. ಇರಾನ್ ಧ್ವಜಗಳು, ಖಾಮೆನೇಯಿ ಭಾವಚಿತ್ರಗಳು ಹಾಗೂ ಪ್ರತೀಕಾರದ ಸಂಕೇತವಾದ ಕೆಂಪು ಧ್ವಜಗಳನ್ನು ಹಿಡಿದು ಅಪಾರ ಜನಸ್ತೋಮ ಸೇರಿತ್ತು. ದೇಶದ ಸ್ವಾತಂತ್ರ್ಯ ಮತ್ತು ಸಂಕಲ್ಪವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರತೀಕಾರದ ಘೋಷಣೆಗಳು
ಅಂತ್ಯಕ್ರಿಯೆಗೂ ಮುನ್ನ ನಡೆದ ಕವಿಗೋಷ್ಠಿಯಲ್ಲಿ ಕವಿ ಮೊಹಮ್ಮದ್ ರಸೂಲಿ, “ಇನ್ನು ಮುಂದೆ ಹೆಣದ ಬಟ್ಟೆಯೇ ನಮ್ಮ ಉಡುಪು. ನಿಮ್ಮ ರಕ್ತದ ಮೇಲೆ ಪ್ರಮಾಣ ಮಾಡುತ್ತೇನೆ, ಟ್ರಂಪ್‌ನ ಹತ್ಯೆ ನಮ್ಮ ಜವಾಬ್ದಾರಿ” ಎಂದು ಹೇಳಿದರು. ಅಲ್ಲದೆ, ಖಾಮೆನೇಯಿ ಸಾವಿಗೆ ಕಾರಣರಾದವರನ್ನು ಕೊಲ್ಲದಿದ್ದರೆ ಅದು ಅವಮಾನವಾಗಲಿದೆ ಎಂದೂ ಹೇಳಿದರು.ಶವಪೆಟ್ಟಿಗೆಗಳ ಬಳಿ ಇಂಗ್ಲಿಷ್‌ನಲ್ಲಿ “Kill Trump” (ಟ್ರಂಪ್‌ನನ್ನು ಕೊಲ್ಲಿರಿ) ಎಂದು ಬರೆದಿದ್ದ ಫಲಕಗಳು ಕಂಡುಬಂದವು. ಕಾರ್ಯಕ್ರಮದ ಅವಧಿಯಿಡೀ “ರಾಜಿ ಇಲ್ಲ, ಶರಣಾಗತಿ ಇಲ್ಲ, ಪ್ರತೀಕಾರವೇ ನಮ್ಮ ಗುರಿ” ಎಂಬ ಘೋಷಣೆಗಳು ನಿರಂತರವಾಗಿ ಕೇಳಿಬಂದವು.
ಇರಾನ್‌ನ ಪ್ರಮುಖ ನಾಯಕರು ಭಾಗಿ
97 ವರ್ಷದ ಅಯತೊಲ್ಲಾ ಜಾಫರ್ ಸೋಭಾನಿ ಅವರು ಅಂತಿಮ ಪ್ರಾರ್ಥನೆ ನೆರವೇರಿಸಿದರು. ಖಾಮೆನೇಯಿ ಕುಟುಂಬದ ನಾಲ್ವರು ಸದಸ್ಯರಿಗೂ ಪ್ರಾರ್ಥನೆ ಸಲ್ಲಿಸಲಾಯಿತು. ಅವರ 14 ತಿಂಗಳ ಮೊಮ್ಮಗಳ ಸಣ್ಣ ಶವಪೆಟ್ಟಿಗೆ ಕಾರ್ಯಕ್ರಮದ ಅತ್ಯಂತ ಭಾವನಾತ್ಮಕ ಕ್ಷಣವಾಗಿ ಪರಿಣಮಿಸಿತು.ಇರಾನ್‌ನ ರಾಜಕೀಯ, ಸೇನಾ ಹಾಗೂ ನ್ಯಾಯಾಂಗದ ಬಹುತೇಕ ಎಲ್ಲಾ ಹಿರಿಯ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಲ್-ಕುಡ್ಸ್ ಪಡೆ ಮುಖ್ಯಸ್ಥ ಇಸ್ಮಾಯಿಲ್ ಖಾನಿ ಹಾಗೂ ಐಆರ್‌ಜಿಸಿ ಮುಖ್ಯಸ್ಥ ಅಹ್ಮದ್ ವಾಹಿದಿ ಕೂಡ ಉಪಸ್ಥಿತರಿದ್ದರು.
ಆದರೆ, ಖಾಮೆನೇಯಿ ನಿಧನದ ಬಳಿಕ ಹೊಸ ಸರ್ವೋಚ್ಚ ನಾಯಕರಾಗಿ ನೇಮಕಗೊಂಡ ಮೊಜ್ತಬಾ ಖಾಮೆನೇಯಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ. ದಾಳಿಯಲ್ಲಿ ಗಾಯಗೊಂಡಿರುವುದರಿಂದ ಅವರು ಹಾಜರಾಗಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
‘ಇರಾನ್‌ನ ಸಂಕಲ್ಪ ಕುಗ್ಗುವುದಿಲ್ಲ’
ಅರ್ಮೇನಿಯಾದಲ್ಲಿನ ಇರಾನ್ ರಾಯಭಾರಿ ಖಲೀಲ್ ಶಿರ್‌ಘೊಲಾಮಿ, “ನೀವು ಖಾಮೆನೇಯಿಯನ್ನು ಕೊಂದಿರಬಹುದು. ಆದರೆ ಪರಿಮಳದ ಬಾಟಲಿಯನ್ನು ಒಡೆದಂತಾಗಿದೆ. ಅದರ ಸುಗಂಧ ಈಗ ಎಲ್ಲೆಡೆ ಹರಡಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ ಮೊಹಮ್ಮದ್ ಬಾಘರ್ ಝೋಲ್ಘದರ್, ಈ ಅಂತ್ಯಕ್ರಿಯೆ ಇರಾನ್‌ನ ಶತ್ರುಗಳ ವಿರುದ್ಧ ಪ್ರತಿರೋಧ ಮತ್ತು ಖಾಮೆನೇಯಿ ಸಾವಿಗೆ ಪ್ರತೀಕಾರ ಎಂಬ ಎರಡು ಸ್ಪಷ್ಟ ಸಂದೇಶಗಳನ್ನು ರವಾನಿಸಿದೆ ಎಂದು ಹೇಳಿದರು.
ಭಾರೀ ಜನಸಾಗರ
36 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ಉಷ್ಣಾಂಶವಿದ್ದರೂ ಬೆಳಗ್ಗೆಯೇ ಸಾವಿರಾರು ಜನರು ಪ್ರಾರ್ಥನಾ ಮಂದಿರವನ್ನು ತುಂಬಿದರು. ಹಲವರು ಶಹೀದರಾಗಲು ಸಿದ್ಧ ಎಂಬ ಸಂಕೇತವಾಗಿ ಬಿಳಿ ಕಫನ್ ಧರಿಸಿದ್ದರು.ಅಧಿಕೃತ ಹಾಜರಾತಿ ಸಂಖ್ಯೆ ಪ್ರಕಟವಾಗದಿದ್ದರೂ, ಅನಧಿಕೃತ ಅಂದಾಜುಗಳ ಪ್ರಕಾರ ಮೊದಲ ದಿನವೇ 20 ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೂರದೂರಿನಿಂದ ಬಂದ ಭಕ್ತರಿಗೆ ಶಾಲೆಗಳು, ಮಸೀದಿಗಳು ಹಾಗೂ ಖಾಸಗಿ ಮನೆಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿತ್ತು. ಸ್ವಯಂಸೇವಕರು ಆಹಾರ, ಚಹಾ ಮತ್ತು ಪಾನೀಯಗಳನ್ನು ವಿತರಿಸಿದರು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಕೆಲವರು, “ಅಗತ್ಯವಿದ್ದರೆ ಅಮೆರಿಕದ ವಿರುದ್ಧ ಯಾವುದೇ ಆಯುಧದಿಂದಲೂ ಹೋರಾಡುತ್ತೇವೆ” ಎಂದು ಹೇಳಿದರೆ, ಮತ್ತೊಬ್ಬರು “ದೇಶದಲ್ಲಿ ಸುಧಾರಣೆ ಬೇಕು, ಆದರೆ ಅದು ವಿದೇಶಿ ಹಸ್ತಕ್ಷೇಪದಿಂದಲ್ಲ, ದೇಶದೊಳಗೇ ಆಗಬೇಕು” ಎಂದು ಅಭಿಪ್ರಾಯಪಟ್ಟರು.

