ಸ್ವಂತ ಮನೆ ಖರೀದಿಸಬೇಕಾದರೂ, ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಪಡೆಯಬೇಕಾದರೂ ಪ್ರತಿಯೊಬ್ಬರಿಗೂ ದೊಡ್ಡ ಮೊತ್ತದ ಹಣ ಅಗತ್ಯವಿರುತ್ತದೆ. ಬ್ಯಾಂಕ್ FD (ಫಿಕ್ಸ್ಡ್ ಡಿಪಾಜಿಟ್) ಅಥವಾ ಚಿನ್ನದಂತಹ ಸಾಂಪ್ರದಾಯಿಕ ಹೂಡಿಕೆಗಳು ಸುರಕ್ಷಿತವಾದವುಗಳೇ ಆಗಿದ್ದರೂ, ಅಲ್ಪಾವಧಿಯಲ್ಲಿ ಒಂದು ಕೋಟಿ ರೂಪಾಯಿ ನಿಧಿ ಸಂಗ್ರಹಿಸುವುದು ಕಷ್ಟ. ಇದಕ್ಕೆ ಪರ್ಯಾಯವಾಗಿ ಮ್ಯೂಚುವಲ್ ಫಂಡ್ಸ್‌ನ SIP (Systematic Investment Plan) ಒಂದು ಅತ್ಯುತ್ತಮ ಮಾರ್ಗವಾಗಿದೆ. ಕೇವಲ 10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಲು ಬಯಸುವವರು ತಮ್ಮ ವಾರ್ಷಿಕ ರಿಟರ್ನ್ (CAGR) ಆಧಾರದ ಮೇಲೆ ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ನೋಡೋಣ.
10 ವರ್ಷಗಳಲ್ಲಿ ₹1 ಕೋಟಿ: ಎಷ್ಟು ಹೂಡಿಕೆ ಮಾಡಬೇಕು?
ಮ್ಯೂಚುವಲ್ ಫಂಡ್ಸ್ ಕ್ಯಾಲ್ಕುಲೇಟರ್ ಪ್ರಕಾರ, 10 ವರ್ಷಗಳಲ್ಲಿ ₹1 ಕೋಟಿ ಗುರಿಯನ್ನು ತಲುಪಲು ನೀವು ಪ್ರತಿ ತಿಂಗಳು ಮಾಡುವ SIP ಮೊತ್ತವು ನಿಮ್ಮ ಹೂಡಿಕೆಗೆ ದೊರೆಯುವ ವಾರ್ಷಿಕ ರಿಟರ್ನ್ ಶೇಕಡಾವಾರಿನ ಮೇಲೆ ಅವಲಂಬಿತವಾಗಿರುತ್ತದೆ.
12% ವಾರ್ಷಿಕ ರಿಟರ್ನ್ ಇದ್ದರೆ
ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗೆ ಸರಾಸರಿ ವರ್ಷಕ್ಕೆ 12% ರಿಟರ್ನ್ ಬಂದರೆ, 10 ವರ್ಷಗಳಲ್ಲಿ ₹1 ಕೋಟಿ ಪಡೆಯಲು ನೀವು ತಿಂಗಳಿಗೆ ಸುಮಾರು ₹43,150 SIP ಮಾಡಬೇಕು. 10 ವರ್ಷಗಳ ನಂತರ ನಿಮ್ಮ ಬಳಿ ಸುಮಾರು ₹1,00,25,431 ಇರುತ್ತದೆ.
14% ವಾರ್ಷಿಕ ರಿಟರ್ನ್ ಇದ್ದರೆ:
ಸ್ಟಾಕ್ ಮಾರುಕಟ್ಟೆಯ ಪ್ರದರ್ಶನ ಉತ್ತಮವಾಗಿದ್ದರೆ ಮತ್ತು 14% ರಿಟರ್ನ್ ದೊರೆತರೆ, ನಿಮ್ಮ ತಿಂಗಳ ಹೂಡಿಕೆ ಕಡಿಮೆಯಾಗುತ್ತದೆ. ಆಗ ನೀವು ತಿಂಗಳಿಗೆ ಸುಮಾರು ₹38,250 ಹೂಡಿಕೆ ಮಾಡಿದರೆ ಸಾಕು. 10 ವರ್ಷಗಳಲ್ಲಿ ಇದು ಸುಮಾರು ₹1,00,24,995 ಆಗುತ್ತದೆ.
16% ವಾರ್ಷಿಕ ರಿಟರ್ನ್ ಇದ್ದರೆ:
ನೀವು ಆಯ್ಕೆ ಮಾಡಿದ ಫಂಡ್ಸ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ 16% ರಿಟರ್ನ್ ನೀಡಿದರೆ, ನಿಮ್ಮ ತಿಂಗಳ ಹೂಡಿಕೆ ಇನ್ನೂ ಕಡಿಮೆಯಾಗುತ್ತದೆ. ನೀವು ತಿಂಗಳಿಗೆ ಕೇವಲ ₹33,750 ಹೂಡಿಕೆ ಮಾಡಿದರೂ 10 ವರ್ಷಗಳಲ್ಲಿ ₹1 ಕೋಟಿ ಗುರಿ ತಲುಪಬಹುದು.
ಈಕ್ವಿಟಿ ಮ್ಯೂಚುವಲ್ ಫಂಡ್ಸ್ ಏಕೆ ?
ಆರ್ಥಿಕ ತಜ್ಞರ ಪ್ರಕಾರ, 10% ಕ್ಕಿಂತ ಹೆಚ್ಚು ವಾರ್ಷಿಕ ರಿಟರ್ನ್ ನಿರೀಕ್ಷಿಸುವವರಿಗೆ ಈಕ್ವಿಟಿ ಮ್ಯೂಚುವಲ್ ಫಂಡ್ಸ್ (ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಫಂಡ್ಸ್) ಉತ್ತಮ ಆಯ್ಕೆ. ಡೆಟ್ ಫಂಡ್ಸ್ ಅಥವಾ ಸರ್ಕಾರಿ ಉಳಿತಾಯ ಯೋಜನೆಗಳಲ್ಲಿ ಇಷ್ಟು ದೊಡ್ಡ ರಿಟರ್ನ್ ಪಡೆಯುವುದು ಕಷ್ಟ. ಆದರೆ ಈಕ್ವಿಟಿ ಮ್ಯೂಚುವಲ್ ಫಂಡ್ಸ್ ಮಾರುಕಟ್ಟೆಯ ಏರಿಳಿತಗಳಿಗೆ ಒಳಪಡುವುದರಿಂದ, ದೊಡ್ಡ ಮೊತ್ತ ಹೂಡಿಸುವ ಮೊದಲು ಪ್ರಮಾಣಿತ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸುವುದು ಉತ್ತಮ.

