ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಗ್ವಾದರ್ ಜಿಲ್ಲೆಯ ಜಿವಾನಿ ಪ್ರದೇಶದಲ್ಲಿರುವ ಪಾಕಿಸ್ತಾನ ಕೋಸ್ಟ್ ಗಾರ್ಡ್ ಶಿಬಿರದ ಮೇಲೆ ನಡೆದ ಆತ್ಮಾಹುತಿ ದಾಳಿಯ ಹೊಣೆಯನ್ನು ನಿಷೇಧಿತ ಸಂಘಟನೆಯಾದ ಬಲೂಚ್ ಲಿಬರೇಷನ್ ಆರ್ಮಿ (BLA) ಹೊತ್ತುಕೊಂಡಿದೆ. ಈ ದಾಳಿಯಲ್ಲಿ 30ಕ್ಕೂ ಹೆಚ್ಚು ಪಾಕಿಸ್ತಾನಿ ಅರೆಸೇನಾ ಸಿಬ್ಬಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬಿಎಲ್‌ಎ ಹೇಳಿದೆ.
ಬಿಎಲ್‌ಎ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು (SVBIED) ಪನ್ವಾನ್ ಕೋಸ್ಟ್ ಗಾರ್ಡ್ ಶಿಬಿರದೊಳಗೆ ನುಗ್ಗಿಸಿ ಸ್ಫೋಟಿಸಲಾಗಿದೆ. ಈ ಭಾರೀ ಸ್ಫೋಟದಿಂದ ಶಿಬಿರ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ನಂತರ ಬಿಎಲ್‌ಎಯ ವಿಶೇಷ ಪಡೆಯಾದ ‘ಫತೇಹ್ ಸ್ಕ್ವಾಡ್’ ನಾಲ್ಕು ದಿಕ್ಕುಗಳಿಂದ ದಾಳಿ ನಡೆಸಿದೆ ಎಂದು ಸಂಘಟನೆ ಹೇಳಿಕೊಂಡಿದೆ.
ಬಿಎಲ್‌ಎ ವಕ್ತಾರ ಜೀಯಾಂದ್ ಬಲೂಚ್ ಅವರ ಹೇಳಿಕೆಯಂತೆ, “ಈ ಪ್ರಬಲ ಸ್ಫೋಟದಿಂದ ಕೋಸ್ಟ್ ಗಾರ್ಡ್‌ನ ಬಲಿಷ್ಠ ಶಿಬಿರ ಸಂಪೂರ್ಣವಾಗಿ ಅವಶೇಷಗಳ ರಾಶಿಯಾಗಿದೆ. ಸ್ಫೋಟದ ತಕ್ಷಣವೇ ನಮ್ಮ ಪಡೆಗಳು ಸಂಘಟಿತವಾಗಿ ಶಿಬಿರದ ಮೇಲೆ ದಾಳಿ ನಡೆಸಿದವು.”ಸಂಘಟನೆಯ ಪ್ರಕಾರ, ಈ ದಾಳಿಯಲ್ಲಿ 30ಕ್ಕೂ ಹೆಚ್ಚು ಪಾಕಿಸ್ತಾನಿ ಅರೆಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು, ಡಜನ್‌ಗಟ್ಟಲೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವವರು ಹಾಗೂ ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಬಿಎಲ್‌ಎ ಹೇಳಿದೆ.
ಈ ದಾಳಿಯ 43 ಸೆಕೆಂಡುಗಳ ವೀಡಿಯೊವನ್ನೂ ಬಿಎಲ್‌ಎಯ ಮಾಧ್ಯಮ ವಿಭಾಗ ಹಕ್ಕಲ್ (Hakkal) ಬಿಡುಗಡೆ ಮಾಡಿದೆ. ಅದರಲ್ಲಿ ಸ್ಫೋಟಕಗಳಿಂದ ತುಂಬಿದ ಟ್ರಕ್ ಶಿಬಿರದೊಳಗೆ ಪ್ರವೇಶಿಸಿ ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸುವ ದೃಶ್ಯಗಳು ಕಂಡುಬರುತ್ತವೆ ಎಂದು ವರದಿಯಾಗಿದೆ.ಆದರೆ, ಬಿಎಲ್‌ಎ ಮಾಡಿರುವ ಸಾವುನೋವಿನ ಕುರಿತು ಪಾಕಿಸ್ತಾನ ಸರ್ಕಾರ ಅಥವಾ ಭದ್ರತಾ ಪಡೆಗಳು ಇದುವರೆಗೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಘಟನೆಯ ಕುರಿತು ತನಿಖೆ ಮುಂದುವರಿದಿದೆ.
ಬಲೂಚ್ ಲಿಬರೇಷನ್ ಆರ್ಮಿ (BLA) ಬಲೂಚಿಸ್ತಾನದ ಪ್ರತ್ಯೇಕತಾವಾದಿ ನಿಷೇಧಿತ ಸಂಘಟನೆಯಾಗಿದ್ದು, ಈ ಹಿಂದೆ ಪಾಕಿಸ್ತಾನದ ಭದ್ರತಾ ಪಡೆಗಳು, ಸರ್ಕಾರಿ ಮೂಲಸೌಕರ್ಯಗಳು ಹಾಗೂ ಚೀನಾ ಬೆಂಬಲಿತ ಯೋಜನೆಗಳ ಮೇಲೆ ಹಲವು ದಾಳಿಗಳ ಹೊಣೆಯನ್ನು ಹೊತ್ತುಕೊಂಡಿದೆ.

