ಬೆಂಗಳೂರು : ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾ ‘ಅಮೆರಿಕಾ ಅಮೆರಿಕಾ’. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ 1997ರಲ್ಲಿ ತೆರೆಕಂಡ ‘ಅಮೆರಿಕಾ ಅಮೆರಿಕಾ’ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ನಿರ್ಮಿಸಿದ ಸಿನಿಮಾ. ಪ್ರೀತಿ, ಸ್ನೇಹ, ದೇಶಾಭಿಮಾನ, ವಲಸೆ ಜೀವನದ ಸಂಕೀರ್ಣತೆ ಹಾಗೂ ಸಂಬಂಧಗಳ ಸೂಕ್ಷ್ಮ ಭಾವನೆಗಳನ್ನು ಮನಮುಟ್ಟುವ ರೀತಿಯಲ್ಲಿ ಹೇಳಿದ ಈ ಚಿತ್ರ ಇಂದಿಗೂ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
ಕನ್ನಡ ಚಿತ್ರರಂಗದಲ್ಲಿ ವಿದೇಶಿ ಹಿನ್ನೆಲೆಯ ಕಥೆಯನ್ನು ಹೊಸ ಆಯಾಮದಲ್ಲಿ ಪರಿಚಯಿಸಿದ ಸಿನಿಮಾ. ರಮೇಶ್ ಅರವಿಂದ್, ಆನಂದ್ ಹಾಗೂ ಹೇಮಾ ಪಂಚಮುಖಿ ಅವರ ಅಭಿನಯ ಪ್ರೇಕ್ಷಕರ ಮನಗೆದ್ದಿತ್ತು. ಮನೋ ಮೂರ್ತಿ ಅವರ ಸಂಗೀತ ಚಿತ್ರದ ಜೀವಾಳವಾಗಿದ್ದು, ‘ನೂರು ಜನ್ಮಕು…’ ಸೇರಿದಂತೆ ಹಲವು ಹಾಡುಗಳು ಇಂದಿಗೂ ಜನಪ್ರಿಯವಾಗಿದೆ.ಅತ್ಯುತ್ತಮ ಕನ್ನಡ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳನ್ನು ಪಡೆದುಕೊಂಡ ಸಿನಿಮಾ ಕೂಡ ಇದು. ಇದೀಗ ಈ ಸಿನಿಮಾ ಸೀಕ್ವೆಲ್ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಸೂಪರ್ಹಿಟ್ ಕ್ಲಾಸಿಕ್ ಸಿನಿಮಾ ‘ಅಮೆರಿಕಾ ಅಮೆರಿಕಾ’ ಬಿಡುಗಡೆಯಾಗಿ ಸುಮಾರು 30 ವರ್ಷಗಳಾದ ಬಳಿಕ ಇದೀಗ ಅದರ ಸೀಕ್ವೆಲ್ ನಿರ್ಮಾಣವಾಗಲಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ.
1997ರಲ್ಲಿ ಬಿಡುಗಡೆಯಾದ ‘ಅಮೆರಿಕಾ ಅಮೆರಿಕಾ’ ಚಿತ್ರವು ಕನ್ನಡ ಸಿನಿರಂಗದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿತ್ತು. ದೇಶಭಕ್ತಿ, ಸ್ನೇಹ, ಪ್ರೀತಿ ಹಾಗೂ ವಿದೇಶ ಜೀವನದ ಕನಸುಗಳ ಸುತ್ತ ಸಾಗಿದ ಈ ಸಿನಿಮಾ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಪಾರ ಮೆಚ್ಚುಗೆ ಪಡೆದಿತ್ತು. ಚಿತ್ರದ ಹಾಡುಗಳು ಇಂದಿಗೂ ಸಿನಿಪ್ರಿಯರ ಮನಸ್ಸಿನಲ್ಲಿ ಉಳಿದಿವೆ.
ಇದು ಆ ಚಿತ್ರದ ಮುಂದುವರಿದ ಭಾಗ ಅಲ್ಲ. ಆ ಕಥೆಯೇ ಬೇರೆ. ಈ ಕಥೆಯೇ ಬೇರೆ. ಇಲ್ಲೂ 3 ಮುಖ್ಯ ಪಾತ್ರಗಳಿವೆ. ಇಲ್ಲಿ ಅಲ್ಲಿಯ ಹಾಗೆ ಸೂರ್ಯ, ಭೂಮಿ, ಶಶಾಂಕ್ ಪಾತ್ರಗಳಿಲ್ಲ. ಇದೇ ಬೇರೆ ಪಾತ್ರಗಳು ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.ಹೊಸ ತಲೆಮಾರಿನ ಕಥೆಯೊಂದಿಗೆ ಸಿನಿಮಾ ಮೂಡಿಬರಲಿದೆ ಎಂದು ತಿಳಿದುಬಂದಿದೆ. ಮೊದಲ ಭಾಗದ ಭಾವನಾತ್ಮಕ ಸ್ಪರ್ಶವನ್ನು ಉಳಿಸಿಕೊಂಡೇ ಇಂದಿನ ಸಾಮಾಜಿಕ ಹಾಗೂ ಜಾಗತಿಕ ಬದುಕಿನ ಬದಲಾವಣೆಗಳನ್ನು ಕಥೆಯಲ್ಲಿ ಪ್ರತಿಬಿಂಬಿಸುವ ಉದ್ದೇಶ ನಿರ್ದೇಶಕರದ್ದಾಗಿದೆ.30 ವರ್ಷಗಳ ನಂತರ ಮರಳುತ್ತಿರುವ ಈ ಜನಪ್ರಿಯ ಚಿತ್ರದ ಸೀಕ್ವೆಲ್ಗಾಗಿ ಕನ್ನಡ ಸಿನಿಪ್ರಿಯರು ಈಗಾಗಲೇ ಕಾತರದಿಂದ ಕಾಯುತ್ತಿದ್ದಾರೆ.ನಾಗತಿಹಳ್ಳಿ ಚಂದ್ರಶೇಖರ್ ಮತ್ತೊಮ್ಮೆ ಈ ಚಿತ್ರಕ್ಕೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಹಾಗೂ ಶಾನ್ವಿ ಶ್ರೀವಾತ್ಸವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಪೋಸ್ಟ್
ಮಹಾಭಾರತದಲ್ಲಿ ಇಲ್ಲದಿರೋದು ಜಗತ್ತಲ್ಲಿ ಏನೂ ಇಲ್ಲ. ನಾವು ಸುಮ್ನೆ ಬೊಗಳೆ ಬಿಡ್ತೀವಿ. ನಮ್ದು ಹೊಸಾ ಕಥೆ, ನಾವು ಡಿಫರೆಂಟು ಅಂಥ. ಹಂಗೇನಿಲ್ಲ.ಎಲ್ಲ ಅದ್ಭುತ ಚಿಂತನೆಗಳೂ ಇಲ್ಲಿ ಸಂಭವಿಸಿಯಾಗಿದೆ. ಅದೆಲ್ಲಾ ಅತ್ಲಾಗಿಡಿ. ನನ್ಜೊತೆ ಕ್ರಿಯಾಶೀಲವಾಗಿರೋ ಕಿರಿಯರನೇಕರು ಮೊದಲ ಆವೃತ್ತಿ ‘ಅಮೆರಿಕಾ! ಅಮೆರಿಕಾ!!’ಬಿಡುಗಡೆಯಾದಾಗ ಹುಟ್ಟೇ ಇರಲಿಲ್ಲ ಅನ್ನುವುದು ಈಗ ಸೋಜಿಗ. ನಾವು ಬೇಗ ಹುಟ್ಟಿದ್ದು ಸಾಧನೆಯೇನೂ ಅಲ್ಲ… ಎಂದು ನಾಗತಿಹಳ್ಳಿ ಚಂದ್ರಶೇಖರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

