HomeEntertainmentದಯವಿಟ್ಟು ವದಂತಿಗಳನ್ನು ನಿಲ್ಲಿಸಿ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ : ಭಾವನಾತ್ಮಕ ಪೋಸ್ಟ್ ಮೂಲಕ ಕೃಷಿ...

ದಯವಿಟ್ಟು ವದಂತಿಗಳನ್ನು ನಿಲ್ಲಿಸಿ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ : ಭಾವನಾತ್ಮಕ ಪೋಸ್ಟ್ ಮೂಲಕ ಕೃಷಿ ತಾಪಂಡ ಫಸ್ಟ್ ರಿಯಾಕ್ಷನ್

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ (Krishi Thapanda) ಅವರ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಇತ್ತೀಚೆಗೆ ನಟಿ ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೂನ್ 25 ರ ಸಂಜೆ ಚಾಮರಾಜಪೇಟೆ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆಯೂ ನೆರವೇರಿತ್ತು. ಈ ಆಘಾತಕಾರಿ ಘಟನೆಯ ನಂತರ ತೀವ್ರ ದುಃಖದಲ್ಲಿದ್ದ ನಟಿ ಕೃಷಿ ತಾಪಂಡ, ಇದೀಗ ಮೊದಲ ಬಾರಿಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.ನಿರಂತರ ವದಂತಿಗಳು ಮತ್ತು ಮಾಧ್ಯಮಗಳ ಒತ್ತಡಕ್ಕೆ ಬೇಸತ್ತು ಕೃಷಿ ತಾಪಂಡ ಬರೆದುಕೊಂಡಿರುವ ಪೋಸ್ಟ್‌ನ ವಿವರ ಇಲ್ಲಿದೆ:

“ನನ್ನ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ”

“ಇಂತಹದ್ದೊಂದನ್ನು ಬರೆಯಬೇಕಾಗಿ ಬರುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಇದನ್ನು ಜಗತ್ತಿನ ಮುಂದೆ ಇಡಲು ನನ್ನಲ್ಲಿ ಮಾನಸಿಕ ದೃಢತೆಯಾಗಲಿ ಅಥವಾ ಶಕ್ತಿಯಾಗಲಿ ಇಲ್ಲ. ಆದರೆ ನನ್ನ ಮೇಲೆ, ನನ್ನ ಸ್ನೇಹಿತರು ಹಾಗೂ ಕುಟುಂಬದ ಮೇಲೆ ಬರುತ್ತಿರುವ ನಿರಂತರ ಒತ್ತಡ ಮತ್ತು ಊಹಾಪೋಹಗಳಿಂದಾಗಿ ನಾನು ಈ ಹೇಳಿಕೆ ನೀಡಬೇಕಾಗಿ ಬಂದಿದೆ” ಎಂದು ಕೃಷಿ ಬರೆದುಕೊಂಡಿದ್ದಾರೆ.

“ಕಳೆದ ಕೆಲವು ದಿನಗಳು ನನ್ನ ಜೀವನವನ್ನು ಪೂರ್ತಿಯಾಗಿ ಬದಲಾಯಿಸಿವೆ. ಸದಾ ನನ್ನ ಬೆನ್ನಿಗೆ ನಿಂತು, ನನ್ನನ್ನು ರಕ್ಷಿಸಿ, ಕೇವಲ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ವ್ಯಕ್ತಿಯನ್ನು ನಾನು ಕಳೆದುಕೊಂಡಿದ್ದೇನೆ. ಅವರನ್ನು ಕಳೆದುಕೊಂಡಿರುವುದು ಮಾತುಗಳಲ್ಲಿ ವಿವರಿಸಲಾಗದ ಶೂನ್ಯತೆಯನ್ನು ಸೃಷ್ಟಿಸಿದೆ. ಈ ನಷ್ಟವನ್ನು ನಾನು ಎಂದಾದರೂ ಒಪ್ಪಿಕೊಳ್ಳಲು ಸಾಧ್ಯವೇ? ನನಗೇ ತಿಳಿಯುತ್ತಿಲ್ಲ” ಎಂದು ಕಣ್ಣೀರಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

View this post on Instagram

A post shared by Krishi Thapanda (@krishithapanda)

ಮಾಧ್ಯಮಗಳು ಮತ್ತು ವದಂತಿ ಹರಡುವವರ ವಿರುದ್ಧ ಬೇಸರ ಹೊರಹಾಕಿರುವ ನಟಿ, “ಅಲ್ಲಿ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬವಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳೆಯನನ್ನು ಕಳೆದುಕೊಂಡ ಸ್ನೇಹಿತರಿದ್ದಾರೆ. ಆದರೆ ಕೆಲವರು ಒಬ್ಬರ ಸಾವನ್ನು ಕೇವಲ ಒಂದು ಸುದ್ದಿಯನ್ನಾಗಿ, ಹೆಡ್‌ಲೈನ್ಸ್ ಅಥವಾ ಮನರಂಜನೆಯ ಸರಕನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಕನಿಷ್ಠ ನೆಮ್ಮದಿಯಿಂದ ದುಃಖಿಸಲು ಸಮಯ ಅಥವಾ ಮುಕ್ತ ಅವಕಾಶವೂ ಸಿಗುತ್ತಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

“ಕೆಲವು ಮಾಧ್ಯಮಗಳು ಗೌರವ ನೀಡುತ್ತಿದ್ದರೆ, ಇನ್ನು ಕೆಲವು ಮಾಧ್ಯಮಗಳು ನಮ್ಮಿಂದ ಪ್ರತಿಕ್ರಿಯೆ ಪಡೆಯಲು ಪ್ರಚೋದಿಸುತ್ತಲೇ ಇವೆ. ಅವರ ಮೊದಲ ಪ್ರಶ್ನೆ ಯಾವಾಗಲೂ ʻನಿಮ್ಮ ಪ್ರತಿಕ್ರಿಯೆ ಏನು?ʼ ಎಂದಿರುತ್ತದೆಯೇ ಹೊರತು, ʻನೀವು ಚೆನ್ನಾಗಿದ್ದೀರಾ?ʼ ಎಂಬುದಾಗಿ ಇರುವುದಿಲ್ಲ. ದುಃಖದಲ್ಲಿರುವ ಯಾವುದೇ ವ್ಯಕ್ತಿಯೂ ತನ್ನ ನೋವನ್ನು ನ್ಯಾಯಸಮ್ಮತ ಎಂದು ಸಾಬೀತುಪಡಿಸಬೇಕಾದ ಅನಿವಾರ್ಯತೆ ಇರಬಾರದು” ಎಂದು ಖಡಕ್ ಆಗಿ ಹೇಳಿದ್ದಾರೆ.

ಮಾನಸಿಕ ಆರೋಗ್ಯದ ಸೂಕ್ಷ್ಮತೆಯನ್ನು ನೆನಪಿಸಿರುವ ನಟಿ, “ನಿಮಗೆ ಯಾರ ಮುಖದಲ್ಲೂ ನಗು ತರಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರ ಕಣ್ಣೀರಿಗೆ ನೀವೇ ಕಾರಣವಾಗಬೇಡಿ. ನಿಮಗೆ ಯಾರಿಗಾದರೂ ಬದುಕಲು ಒಂದು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳಲು ನೀವೇ ಕಾರಣವಾಗಬೇಡಿ” ಎಂದು ಭಾವುಕರಾಗಿದ್ದಾರೆ.

ಕೊನೆಯದಾಗಿ, ತಮಗಾಗಿ ಪ್ರಾರ್ಥಿಸುತ್ತಿರುವ ಮತ್ತು ಸಂದೇಶ ಕಳುಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿರುವ ಕೃಷಿ ತಾಪಂಡ, “ದಯವಿಟ್ಟು ಆತನ ಆತ್ಮಕ್ಕೆ ಶಾಂತಿ ಸಿಗಲು ಬಿಡಿ ಮತ್ತು ಆತನ ಕುಟುಂಬ, ಸ್ನೇಹಿತರು ಹಾಗೂ ನಮ್ಮೆಲ್ಲರಿಗೂ ನೆಮ್ಮದಿಯಿಂದ ದುಃಖಿಸಲು ಪ್ರೈವೆಸಿ ಕೊಡಿ, ನಾನು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಇದನ್ನು ನಿಲ್ಲಿಸಿ” ಎಂದು ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular