ಚಿತ್ರದುರ್ಗ: ದೇಶದಲ್ಲಿ ಪೋಲಿಯೊ ಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಹಮ್ಮಿಕೊಳ್ಳುತ್ತಿರುವ ಪಲ್ಸ್ ಪೋಲಿಯೊ ಅಭಿಯಾನವು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ತಿಳಿಸಿದರು.
ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವರ್ಷ ಹಮ್ಮಿಕೊಳ್ಳುವ ಈ ಬೃಹತ್ ಲಸಿಕಾ ಅಭಿಯಾನದ ಮೂಲಕ ಹುಟ್ಟಿದ ಹಸುಗೂಸಿನಿಂದ ಹಿಡಿದು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಬೇಕು. ಈ ಮೂಲಕ ಮಾರಕವಾಗಿರುವ ಪೋಲಿಯೊ ವೈರಸ್‍ನಿಂದ ಮಕ್ಕಳನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳೊಂದಿಗೆ ಅನೇಕ ಸಂಘ-ಸಂಸ್ಥೆಗಳು ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದ ಅವರು, ಮಕ್ಕಳ ಆರೋಗ್ಯದ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ ಇಂದಿನ ದಿನ ಅತ್ಯಂತ ಪ್ರಮುಖವಾದುದಾಗಿದೆ ಎಂದು ಹೇಳಿದರು.
ಲಸಿಕಾ ಕೇಂದ್ರಕ್ಕೆ ಬಂದು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವುದರ ಜೊತೆಗೆ, ಪೋಷಕರು ತಮ್ಮ ಸುತ್ತಮುತ್ತಲಿನ ನೆರೆಹೊರೆಯವರಿಗೂ ಹಾಗೂ ಪರಿಚಿತ ಕುಟುಂಬದವರಿಗೂ ಪೋಲಿಯೋ ಲಸಿಕೆಯ ಮಹತ್ವ ತಿಳಿಸಬೇಕು. ಪಲ್ಸ್ ಪೋಲಿಯೊ ಜಾಗೃತಿಯ ರಾಯಭಾರಿಗಳಾಗಿ ಕೆಲಸ ಮಾಡಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಸಮಗ್ರ ಆರೋಗ್ಯಕ್ಕಾಗಿ ‘ಮಿಷನ್ ಇಂದ್ರಧನುಷ್’ ಯೋಜನೆಯಡಿ ಏಳು ಪ್ರಮುಖ ರೋಗಗಳ ವಿರುದ್ಧ ಲಸಿಕೆಯನ್ನು ನೀಡುತ್ತಿವೆ. ಈ ಎಲ್ಲಾ ಲಸಿಕೆಗಳನ್ನು ಪೋಷಕರು ಕಾಲಕಾಲಕ್ಕೆ ಮಕ್ಕಳಿಗೆ ಕೊಡಿಸುವ ಮೂಲಕ ಅವರನ್ನು ಆರೋಗ್ಯವಂತ ಶಿಶುಗಳನ್ನಾಗಿ, ದೇಶದ ಸತ್ಪ್ರಜೆಗಳನ್ನಾಗಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ತಾಯಿ-ತಂದೆಯರ ಮೇಲಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಅನೇಕ ಬಾರಿ ಪೋಷಕರು ನಿರ್ಲಕ್ಷ್ಯ ವಹಿಸುವುದನ್ನು ನಾವು ಕಾಣುತ್ತೇವೆ. ಮಗುವಿಗೆ ಜ್ವರ ಬಂದ ತಕ್ಷಣ ವೈದ್ಯರ ಬಳಿ ಕರೆತರದೆ, ಪರಿಸ್ಥಿತಿ ತೀರಾ ಹದಗೆಟ್ಟ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಧಾವಿಸುತ್ತಾರೆ. ಅಂತಹ ಸಮಯದಲ್ಲಿ ಮಗುವನ್ನು ಗುಣಪಡಿಸುವುದು ವೈದ್ಯರಿಗೂ ಕಷ್ಟವಾಗುತ್ತದೆ. ಹಾಗಾಗಿ, ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದ ತಕ್ಷಣ ಸಾರ್ವಜನಿಕರು ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಸರ್ಕಾರದ ಹಂತದಲ್ಲಿ ಉಚಿತವಾಗಿ ಸಿಗುವ ವೈದ್ಯಕೀಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತವು ಕಳೆದ 15 ವರ್ಷದಿಂದ ಪೋಲಿಯೊ ಮುಕ್ತ ರಾಷ್ಟ್ರವಾಗಿದೆ. ಇದು ಮಹತ್ತರವಾದ ಸಾಧನೆಯಾಗಿದ್ದು, ಪೋಲಿಯೊ ವೈರಸ್ ಇಂದಿಗೂ ಜಗತ್ತಿನಾದ್ಯಂತ ವಿಶ್ವದ ಹಲವು ದೇಶಗಳನ್ನು ಬಾದಿಸುತ್ತಿದೆ. ಇದರಲ್ಲಿ ಭಾರತದ ನೆರೆಯ ದೇಶಗಳು ಸೇರಿರುವುದು ಭಾರತಕ್ಕೆ ಆತಂಕದ ವಿಚಾರವಾಗಿದೆ. ಪಾಕಿಸ್ತಾನ ಹಾಗೂ ಅಪಘಾನಿಸ್ತಾನ ದೇಶಗಳಲ್ಲಿ ಪೋಲಿಯೊ ಪ್ರಕರಣಗಳು ವರದಿಯಾಗಿರುವುದಿಂದ ಈ ದೇಶಗಳ ಮೂಲಕ ಭಾರತಕ್ಕೆ ಪೋಲಿಯೋ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಹಾಗೂ ಪೋಲಿಯೊ ಮುಕ್ತ ಭಾರತದ ಸ್ಥಿತಿ ಮುಂದುವರಿಸಿಕೊಂಡು ಹೋಗಲು ಮುಂಜಾಗ್ರತಾ ದೃಷ್ಠಿಯಿಂದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಂದುವರೆಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಾಶೀ ಮಾಹಿತಿ ನೀಡಿದರು.
ಜೂನ್ 28ರಂದು ಪೋಲಿಯೋ ಬೂತ್‍ಗಳಲ್ಲಿ ಪೋಲಿಯೊ ಲಸಿಕೆ ನೀಡಲಾಗುವುದು. ನಂತರದ ಮೂರು ದಿನ ಜೂನ್ 29, 30 ಮತ್ತು ಜುಲೈ 01ರಂದು ಮನೆ ಮನೆ ಭೇಟಿ ನೀಡಿ ಬೂತ್‍ಗಳಲ್ಲಿ ಲಸಿಕೆ ಪಡೆಯದೇ ಇರುವ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಪಲ್ಸ್ ಪೋಲಿಯೋ ಕ್ರಿಯಾ ಯೋಜನೆಯಂತೆ 1085 ಪೋಲಿಯೊ ಬೂತ್‍ಗಳು, 1162 ಲಸಿಕಾ ತಂಡಗಳು, 2324 ಲಸಿಕಾಕಾರರಿಂದ, 235 ಮೇಲ್ವಿಚಾರರನ್ನು ಒಳಗೊಂಡ ಒಟ್ಟು 1,42,851 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 0-5 ವರ್ಷ ವಯೋಮಾನದ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಸಹ ಮತ್ತೊಮ್ಮೆ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

