ಬೆಂಗಳೂರು: ಬಿಡದಿಯ ಭಾಧಿತ ರೈತರ ಹಿತಾಸಕ್ತಿಯ ಬಗ್ಗೆ ಚರ್ಚಿಸಲು ನಾನು ನಾಳೆ ಜೂನ್ 27ರಂದು ಶನಿವಾರ ಭೈರಮಂಗಲದಲ್ಲಿ ಮುಖ್ಯಮಂತ್ರಿಗಳಾಗಿ ಕಾಯುತ್ತೇನೆ. ಅವರು ಸ್ಥಳಕ್ಕೆ ಬಂದರೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ಜತೆ ಪತ್ರ ಸಮರ ಅಂತೇನಿಲ್ಲ. ವಿಧಾನಸೌಧಕ್ಕೆ ಬರುವಂತೆ ಅವರು ಪತ್ರ ಬರೆದಿದ್ದರು. ವಿಧಾನಸೌಧ ಬೇಡ, ಭೈರಮಂಗಲದಲ್ಲಿ ನೊಂದ ರೈತರ ಸಮ್ಮುಖದಲ್ಲಿಯೇ ಚರ್ಚೆ ನಡೆಯುವುದು ಸೂಕ್ತ ಎಂದು ನಾನು ಪತ್ರದಲ್ಲಿ ತಿಳಿಸಿದ್ದೆ. ಅಲ್ಲದೆ, ಜೂನ್ 27ರಂದು, ಅಂದರೆ ಶನಿವಾರ ಬಿಡದಿಯ ಭೈರಮಂಗಲದಲ್ಲಿ ಬಹಿರಂಗ ಚರ್ಚೆಗೆ ಬರುತ್ತೇನೆ ಎಂದು ಹೇಳಿದ್ದೆ. ಅದರಂತೆ ನಾನು ಬುಧವಾರ ಭೈರಮಂಗಲಕ್ಕೆ ತೆರಳಿ ಮುಖ್ಯಮಂತ್ರಿಗಳಾಗಿ ಕಾಯುತ್ತೇನೆ. ಅವರು ಬಂದರೆ ಚರ್ಚೆ ನಡೆಸುತ್ತೇನೆ ಎಂದರು.
ಶನಿವಾರ ಮಧ್ಯಾಹ್ನದವರೆಗೂ ನಾನು ಭೈರಮಂಗಲದಲ್ಲಿ ಮುಖ್ಯಮಂತ್ರಿಗಳಿಗಾಗಿ ಕಾಯುತ್ತೇನೆ. ಅವರು ಬಂದರೆ ಸಂತೋಷ. ಚರ್ಚೆಗೆ ಬನ್ನಿ ಎಂದು ಪತ್ರ ಬರೆದಿದ್ದೇನೆ. ಅವರು ಇನ್ನೂ ಏನು ಉತ್ತರ ಕೊಟ್ಟಿಲ್ಲ. ನಾವೇನು ಗಲಾಟೆ ಮಾಡಿಸಲು ಹೋಗುತ್ತಿಲ್ಲ. ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಕೊಡುತ್ತಿದ್ದೇವೆ ಅಷ್ಟೇ ಎಂದರು.
ನಾನು ಕೊಟ್ಟ ಸಮಯಕ್ಕೆ ಹೋಗುತ್ತಿದ್ದೇನೆ. ಅವರು ಬಂದರೆ ಒಳ್ಳೆಯದು. ನಿನ್ನೆಯಿಂದ ಹದಿನೈದು ಇಪ್ಪತ್ತು ಜನ ಭೂಮಿ ಕೊಡಲು ಸಿದ್ದ ಅಂತ ಕೂತಿದ್ದಾರೆ. ಇದರ ಹಿಂದಿನ ವಿಚಾರಗಳನ್ನು ನಾನೂ ಅರ್ಥ ಮಾಡಿಕೊಂಡಿದ್ದೇನೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನಿಲ್ಲ. ರೈತರು ಭೂಮಿ ಕೊಡಲು ಒಪ್ಪಿದರೆ ನನ್ನದೇನೂ ತಕರಾರು ಇಲ್ಲ. ಬಲವಂತವಾಗಿ ರೈತರನ್ನು ಬೆದರಿಸಿದರೆ ಸರಿ ಇರೋದಿಲ್ಲ ಎಂದು ಹೇಳಿದರು.
ನಾನು ಕೂಡ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಅನೇಕ ಸಂದರ್ಭಗಳಲ್ಲಿ ರೈತರ ಬಳಿಯೇ ಹೋಗಿದ್ದೇನೆ. ಇದೇ ಬಿಡದಿ ಯೋಜನೆ ಪ್ರಶ್ನೆ ಬಂದಾಗ ರೈತರನ್ನು ಕೃಷ್ಣಾ ಕಚೇರಿಗೆ ಕರೆಸಿಕೊಂಡು ಅವರ ಸಮ್ಮುಖದಲ್ಲಿಯೇ ಸಭೆ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೇ ಬಿಡದಿ ಉಪನಗರ ಯೋಜನೆಯನ್ನು ವಿರೋಧ ಮಾಡಿದ್ದರು. ರೈತರು ಬೇಡ ಎಂದರು ಕಾಂಗ್ರೆಸ್ ನಾಯಕರಿಗೆ ಯೋಜನೆ ಬೇಕಾಗಿದೆ ಎಂದು ಹೇಳಿದರು.
ರೈತರಿಗೆ ಬೆಂಬಲ ಕೊಡಲು ಭೈರಮಂಗಲಕ್ಕೆ ಹೋಗುತ್ತಿದ್ದೇನೆ. ಕಾನೂನು ಮೀರಿ ರೈತರೇನು ಹೋರಾಟ ಮಾಡುತ್ತಿಲ್ಲ. ನಾನು ಕೂಡ ಕಾನೂನು ಪ್ರಕಾರವೇ ಹೋರಾಟದಲ್ಲಿ ಭಾಗಿಯಾಗುತ್ತೇನೆ. ಶನಿವಾರ ಮಧ್ಯಾಹ್ನದವರಿಗೂ ನಾನು ಭೈರಮಂಗಲದಲ್ಲಿಯೇ ಇದ್ದು ರೈತರ ಮನವಿಗಳನ್ನು ಆಲಿಸುತ್ತೇನೆ. ಮುಖ್ಯಮಂತ್ರಿಗಳು ಚರ್ಚೆಗೆ ಬಂದರೆ ಎಲ್ಲವೂ ಸುಗಮವಾಗಿ ಆಗುತ್ತದೆ. ಸರಕಾರದವರೇ ಬೈರಮಂಗಲದಲ್ಲಿ 144 ಸೆಕ್ಷನ್ ಹಾಕಲು ಹೊರಟಿದ್ದಾರೆ. ನಾವೇನೂ ಗಲಾಟೆ ಮಾಡಲು ಹೋಗುತ್ತಿಲ್ಲ ಎಂದು ಪುನರುಚ್ಛರಿಸಿದರು.
ಕೆಲ ರೈತರು ಭೂಮಿ ಕೊಡಲು ಒಪ್ಪಿರಬಹುದು. ಬಹು ಪ್ರಮಾಣದ ರೈತರು ಭೂಮಿ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಎಲ್ಲಾ ಮಾಹಿತಿಯು ಇದೆ. ಆದರೆ ಸರ್ಕಾರದವರು ಎಲ್ಲರ ಮೇಲೆಯೂ ಗದ ಪ್ರಹಾರ ನಡೆಸಲು ಹೋಗುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ ಎಂದು ಹೇಳಿದರು.
ಇದೇ ವೇಳೆ ತಮ್ಮ ಬಳಿ ದುಬಾರಿ ಮೌಲ್ಯದ ವಾಚ್ ಇದೆ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅದೇನೋ ನನ್ನ ಬಳಿ ದುಬಾರಿ ವಾಚ್ ಇದೆ ಅಂತ ಹೇಳಿದ್ದಾರೆ ಒಬ್ಬರು. ನೋಡಿ.. ನಾನು ಕಟ್ಟಿರುವುದು ಡಾ. ಅಂಬೇಡ್ಕರ್ ಅವರ ಚಿತ್ರ ಇರುವ ಸಾಧಾರಣ ವಾಚ್. ಇದು ಎಚ್ಎಂಟಿ ಸಂಸ್ಥೆ ತಯಾರು ಮಾಡಿರುವ ಗಡಿಯಾರ ಎಂದು ತಾವು ಕಟ್ಟಿದ್ದ ವಾಚ್ ಅನ್ನು ಮಾಧ್ಯಮಗಳಿಗೆ ತೋರಿಸಿದರು.
ಎಸ್ ಐಟಿ ಅವರ ಬಳಿಯೇ ಇದೆ. ಈ ಸರ್ಕಾರದ ಬಳಿ ಪ್ರತಿಯೊಂದುಕ್ಕೂ ಎಸ್ಐಟಿ ಇದೆ. ಬೇಕಾದರೆ ನಮ್ಮ ಮನೆಗೆ ಕಳಿಸಿ ತನಿಖೆ ಮಾಡಿಸಲಿ ಎಂದು ಹೇಳಿದರು.

