HomeKarnatakaಪಿಯು ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣ: 6 ತಿಂಗಳಾದರೂ ಪತ್ತೆಯಾಗದ ಯುವತಿಯರು: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ...

ಪಿಯು ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣ: 6 ತಿಂಗಳಾದರೂ ಪತ್ತೆಯಾಗದ ಯುವತಿಯರು: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಸಿಐಡಿ ಮನವಿ

ಬೆಂಗಳೂರು: ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಕಾಣೆಯಾಗಿರುವ ಕುರಿತಂತೆ ಪ್ರಕಟಣೆ ಹೊರಡಿಸಿದ್ದು, ಅವರ ಬಗ್ಗೆ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಕೋರಿದೆ.

ವಿದ್ಯಾರ್ಥಿನಿಯರು ನಾಪತ್ತೆಯಾಗಿ ಆರು ತಿಂಗಳುಗಳು ಕಳೆದಿವೆ. ಎಷ್ಟೇ ಹುಡುಕಾಟ ನಡೆಸಿದರೂ ಈವರೆಗೆ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ಕಗ್ಗಂಟಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿರಂತರ ಶೋಧ ನಡೆಸಿದರೂ ಪಿಯುಸಿ ವಿದ್ಯಾರ್ಥಿನಿಯರು ಪತ್ತೆಯಾಗದ ಕಾರಣ ನ್ಯಾಯಾಲಯದ ಆದೇಶದ ಮೇರೆಗೆ ಎಪ್ರಿಲ್ ನಲ್ಲಿ ಸಿಐಡಿಗೆ ಆದೇಶಿಸಲಾಗಿತ್ತು. ವಿದ್ಯಾರಣ್ಯಪುರ ಪೊಲೀಸರ ತನಿಖಾ ವರದಿ ಪರಿಶೀಲಿಸಿ ಎಲ್ಲೆಡೆ ಶೋಧ ನಡೆಸಿದರೂ ಪ್ರಯೋಜನವಾಗದ ಕಾರಣ ಸದ್ಯ ಕಾಣೆಯಾಗಿರುವ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ.

ಜ.31ರಂದು ಎಂ.ಎಸ್. ಪಾಳ್ಯ ನಿವಾಸಿ ಆರ್. ತನಿಷ್ಕ್, ಮತ್ತು ಆಕೆಯ ಜ್ಯೂನಿಯರ್ ಆಗಿರುವ ತೇಜಸ್ವಿನಿ ಎಂಬುವರು ವಿದ್ಯಾರಣ್ಯಪುರದಲ್ಲಿ ನಿಗೂಢವಾಗಿ ಕಾಣೆಯಾಗಿದ್ದರು. ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಮನೆಯಿಂದ ಇಬ್ಬರು ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿದ್ದರು. ಬಸ್ ನಿಲ್ದಾಣಗಳಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಾಗಿ ಆರು ತಿಂಗಳು ಕಳೆದರೂ ಎಟಿಎಂ ಕಾರ್ಡ್ ಬಳಸಿಲ್ಲ. ಕುಟುಂಬಸ್ಥರು-ಸಂಬಂಧಿಕರನ್ನು ಸಹ ಅವರು ಸಂಪರ್ಕಿಸಿಲ್ಲ. ಇದರಿಂದ ವಿದ್ಯಾರ್ಥಿನಿಯರನ್ನು ಪತ್ತೆ ಮಾಡುವುದು ಕಷ್ಟವಾಗಿತ್ತು.

ಈ ಮಧ್ಯೆ ಪೋಷಕರು ಹೈಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಪತ್ತೆ ಕಾರ್ಯ ಚುರುಕುಗೊಳಿಸಿ ನಿಗದಿತ ಅವಧಿಯೊಳಗೆ ಪ್ರಕರಣ ಇತ್ಯರ್ಥ ಪಡಿಸಬೇಕು ಎಂದು ವಿದ್ಯಾರಣ್ಯಪುರ ಠಾಣೆಯ ಪೊಲೀಸರಿಗೆ ತಾಕೀತು ಮಾಡಿತ್ತು. ಹೀಗಾಗಿ ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಸಿಐಡಿಗೆ ವಹಿಸಲಾಗಿತ್ತು.

ತಾಂತ್ರಿಕ, ವೈಜ್ಞಾನಿಕವಾಗಿ ತನಿಖೆ ನಡೆಸಿದರೂ ಸುಳಿವು ಸಿಕ್ಕಿಲ್ಲ. ಕುಟುಂಬಸ್ಥರ, ಸ್ನೇಹಿತರ ಹಾಗೂ ಪರಿಚಯಸ್ಥರ ಹೇಳಿಕೆ ಪಡೆದರೂ ಪ್ರಯೋಜವಾಗಿಲ್ಲ. ಹೀಗಾಗಿ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರ ಬಗ್ಗೆ ಸುಳಿವು ದೊರೆತರೆ ಸಿಐಡಿ ಕಂಟ್ರೋಲ್ ನಂಬರ್ 080-22094443 ಹಾಗೂ 9480800123 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತನಿಖಾಧಿಕಾರಿಗಳು ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular