HomeKarnatakaಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್: ಹೊಸಬರಿಗೂ ಅವಕಾಶ ನೀಡುವ ಆಲೋಚನೆ ಇದೆ: ಸಿಎಂ ಡಿ.ಕೆ.ಶಿವಕುಮಾರ್

ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್: ಹೊಸಬರಿಗೂ ಅವಕಾಶ ನೀಡುವ ಆಲೋಚನೆ ಇದೆ: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್. ಅವರು ಕೊಟ್ಟ ಪಟ್ಟಿಯನ್ನು ಅನುಷ್ಠಾನಗೊಳಿಸುವುದು ನನ್ನ ಕೆಲಸ. ನೀವು ಸಲೀಂ ಅಹ್ಮದ್ ಅವರಿಗೆ ಒಳ್ಳೆಯದಾಗಲಿ ಎಂದು ಮನವಿ ಮಾಡಿದ್ದೀರಿ, ನಿಮ್ಮ ಮನವಿಯನ್ನು ಹೈಕಮಾಂಡ್ ನಾಯಕರಿಗೆ ತಲುಪಿಸುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ ವಿವಿಧ ದರ್ಗಾಗಳ ಮುಖಸ್ಥರು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಎಂಎಲ್ ಸಿ ಸಲೀಂ ಅಹ್ಮದ್ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ವೇಳೆ ಅವರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ನೆಲದ ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದೇ ನಮ್ಮ ಸಿದ್ಧಾಂತ. ಸಂವಿಧಾನವನ್ನು ನಂಬಿದ್ದೇವೆ. ಸಂವಿಧಾನದ ಮೇಲೆ ನಡೆಯುತ್ತಿದ್ದೇವೆ. ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ತಬ್ಬಿದ್ದಾರೆ.‌ ನಾವು ನಿಮ್ಮ ಪರವಾಗಿ ಕೆಲಸ ಮಾಡಿದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದಿದೆ ಎಂದರು.

ಪಕ್ಷ ಅಧಿಕಾರಕ್ಕೆ ಬಂದಾಗ ವರಿಷ್ಠರು ನನ್ನನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಅವರು ಹಾಗೂ ನೀವು ಅಧಿಕಾರ ಹಂಚಿಕೆ ಮಾಡಿಕೊಳ್ಳಿ ಎಂದು ಸೂಚಿಸಿತು. ಈ ಗುಟ್ಟು ಕೆಲವರಿಗೆ ಬಿಟ್ಟು ಯಾರಿಗೂ ತಿಳಿದಿರಲಿಲ್ಲ. ನಂತರ ಪಕ್ಷದ ಈಗ ಈ ಸ್ಥಾನದಲ್ಲಿ ನನ್ನನ್ನು ಕೂರಿಸಿದೆ. ಸಲೀಂ ಅಹ್ಮದ್ ಅವರಿಗೆ ಒಳ್ಳೆಯದಾಗಲಿ ಎಂದು ಬೆಂಬಲಿಸಲು ನೀವು ಬಂದಿದ್ದೀರಿ. ನಾನು, ಸಲೀಂ, ವಿನಯ್ ಕುಮಾರ್ ಸೊರಕೆ ಎಲ್ಲರೂ ವಿದ್ಯಾರ್ಥಿ ನಾಯಕರಾಗಿದ್ದವರು. ನಾವು ಒಟ್ಟಿಗೆ ರಾಜಕಾರಣ ಮಾಡಿದ್ದೇವೆ. ಅವರಿಗೆ ಎಂಎಲ್ ಸಿ ಮಾಡಬಾರದು ಎಂದು ವಿರೋಧವಿತ್ತು. ನಾನೇ ಕರೆದುಕೊಂಡು ಹೋಗಿ ಸ್ಪರ್ಧಿಸುವಂತೆ ಮಾಡಿದೆ. ಅವರು ಬೆಂಗಳೂರಿನಲ್ಲಿ ನಿಂತಿದ್ದರೆ ಯಾವತ್ತೋ ಲೋಕಸಭೆಗೆ ಆಯ್ಕೆಯಾಗಿರುತ್ತಿದ್ದರು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ಅವರಿಗೆ ರಾಷ್ಟ್ರ ಮಟ್ಟದಲ್ಲೂ ಅವಕಾಶವಿತ್ತು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃಷ್ಣ ಅವರ ಕಾಲದಲ್ಲಿ ಸಲೀಂ ಅವರನ್ನು ಚೀಫ್ ವಿಪ್ ಮಾಡಿದ್ದೆವು. ಈಗಲೂ ನಮ್ಮ ಸರ್ಕಾರದಲ್ಲಿ ಮುಖ್ಯ ಸಚೇತಕರಾಗಿದ್ದಾರೆ. ನಮಗೆ ಅವರು ಸಹಕಾರ ನೀಡಿದ್ದಾರೆ. ಇತ್ತೀಚಿಗೆ ಸಲೀಂ ಹಾಗೂ ರಿಜ್ವಾನ್ ಸೇರಿ ಉಪಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

ರೆಹಮಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರನ್ನು ಲೋಕಸಭೆಗೆ ಸ್ಪರ್ಧೆಸುವಂತೆ ಮಾಡಿದೆ. ಆಗ ಎಲ್ಲರೂ ನಗುತ್ತಿದ್ದರು. ಗೆಲುವು ಸೋಲು ಬೇರೆ ವಿಚಾರ, ನಿನಗೆ ಪಕ್ಷ ಗುರುತಿಸುತ್ತಿದೆ ಎಂದು ಭಾವಿಸಿ ಎಂದು ನಾನು ಹೇಳಿದೆ. ಈಗ ರಾಜ್ಯಸಭೆ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಲಾಗಿತ್ತು. ಸಿದ್ದರಾಮಯ್ಯ ಅವರು ಬೇಡ ಎಂದಾಗ. ನಾನು ಸಿದ್ದರಾಮಯ್ಯ ಅವರು, ಹೈಕಮಾಂಡ್ ನಾಯಕರು ಚರ್ಚಿಸಿ ಮನ್ಸೂರ್ ಅಲಿ ಖಾನ್ ಅವರನ್ನು ಆಯ್ಕೆ ಮಾಡಿದೆವು. ಅವರು ಭವಿಷ್ಯದ ಭರವಸೆಯ ನಾಯಕರು. ಹೀಗೆ ನಾವು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿದ್ದೇವೆ ಎಂದು ತಿಳಿಸಿದರು.

ಯು. ಟಿ ಖಾದರ್ ಕಳೆದ ಬಾರಿಯೇ ಮಂತ್ರಿ ಆಗಬೇಕಿತ್ತು. ಆದರೆ ಅವರು ತ್ಯಾಗ ಮಾಡಿ, ಸ್ಪೀಕರ್ ಆದರು. ಅವರಿಗೆ ನಾವು ನೀವು ಬಯಸಿದ ಖಾತೆ ನೀಡುವುದಾಗಿ ಮಾತು ಕೊಟ್ಟಿದ್ದವು. ಈಗ ಆರೋಗ್ಯ ಇಲಾಖೆ ನೀಡಿದ್ದೇವೆ ಎಂದರು.

ಈ ಮಧ್ಯೆ ಅನೇಕ ಗೊಂದಲವಾಗಿದ್ದು, ಕೆಲವು ಸ್ವಾಮೀಜಿಗಳು ಸೇರಿದಂತೆ ಮತ್ತೊಬ್ಬರನ್ನು ಮಂತ್ರಿ ಮಾಡಿ ಎಂದು ಹೇಳುತ್ತಿದ್ದಾರೆ. ನೀವುಗಳು ಸಲೀಂ ಅಹ್ಮದ್ ಅವರನ್ನು ಮಾಡಿ ಎಂದು ಹೇಳುತ್ತಿದ್ದೀರಿ. ಹೀಗೆ ಒಕ್ಕಲಿಗರು, ಲಿಂಗಾಯತರು, ಕ್ರೈಸ್ತ ಸಮುದಾಯದವರು ಒಬ್ಬೊಬ್ಬರ ಹೆಸರು ಹೇಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರಾಜಕೀಯವಾಗಿ ತೀರ್ಮಾನ ಮಾಡಲು ಕಷ್ಟವಾಗುತ್ತದೆ. ನಾನು ನಮ್ಮ ಕಷ್ಟವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಪಕ್ಷದ ಎಲ್ಲಾ ಅಲ್ಪಸಂಖ್ಯಾತ ಮುಖಂಡರು ಚೆನ್ನಾಗಿ ಕೆಲಸ ಮಾಡಿದ್ದಾರೆ. ನಾನು ವರಿಷ್ಟರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

ವಿಧಾನಸಭೆಯಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವ ಕಾರಣ, ಪರಿಷತ್ ನಿಂದ ಎಷ್ಟು ಜನರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಗೊಂದಲ ಇದೆ. ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಐದಾರು ಬಾರಿ ಹಿರಿಯರಿಗೆ ಅಧಿಕಾರ ನೀಡಲು ಆಗಿಲ್ಲ. ಇಲ್ಲಿ ವೈಷಮ್ಯ ಆಗುವುದು ಬೇಡ. ನಾನು, ಜಾರ್ಜ್, ಅಪ್ಪಾಜಿ ನಾಡಗೌಡ, ನಜೀರ್ ಸೇರಿದಂತೆ ಅನೇಕ ನಾಯಕರು ಬಂಗಾರಪ್ಪ ಅವರ ಕಾಲದಲ್ಲಿ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿ ಆದೆವು. ಈಗ ಆ ಪರಿಸ್ಥಿತಿ ಇಲ್ಲ. ಹೊಸಬರಿಗೆ ಅವಕಾಶ ನೀಡಬೇಕು ಎಂದು ನಾನು ಹೇಳಿದ್ದೇನೆ. ದೆಹಲಿಯವರು ಆಲೋಚನೆ ಮಾಡುತ್ತಿದ್ದಾರೆ. ನನ್ನ ಜೊತೆ ಇನ್ನು ಚರ್ಚೆ ಮಾಡಿಲ್ಲ ಎಂದು ಮಾಹಿತಿ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular