HomeKarnatakaಸ್ವಂತ ಮನೆಯನ್ನೇ ಮಾರಾಟ ಮಾಡಿ ಯೋಧರ ಕಲ್ಯಾಣ ನಿಧಿಗೆ 10 ಲಕ್ಷ ರೂ. ನೀಡಿದ ನಿವೃತ್ತ...

ಸ್ವಂತ ಮನೆಯನ್ನೇ ಮಾರಾಟ ಮಾಡಿ ಯೋಧರ ಕಲ್ಯಾಣ ನಿಧಿಗೆ 10 ಲಕ್ಷ ರೂ. ನೀಡಿದ ನಿವೃತ್ತ ಶಿಕ್ಷಕಿ

ದಾವಣಗೆರೆ: ದೇಶ ಕಾಯುವ ವೀರ ಯೋಧರ ಸೇವೆ ಮತ್ತು ತ್ಯಾಗವನ್ನು ಸ್ಮರಿಸಿ, ಅವರ ಕಲ್ಯಾಣಕ್ಕಾಗಿ ತಮ್ಮ ಜೀವಿತಾವಧಿಯ ಸಂಪಾದನೆಯನ್ನು ಧಾರೆ ಎರೆಯುವ ಮೂಲಕ ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯಾದ್ಯಂತ ತಾವೊಬ್ಬರೇ ಹೋರಾಟ ನಡೆಸಿ ‘ದಯಾ ಮರಣ ಹೋರಾಟಗಾರ’ ಎಂದೇ ಪ್ರಸಿದ್ಧರಾಗಿರುವ ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರು, ತಮ್ಮ ನಿವೃತ್ತಿ ವೇತನ(ಪೆನ್ಷನ್) ಹಾಗೂ ಸ್ವಂತ ಮನೆಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಒಟ್ಟು 10 ಲಕ್ಷ ರೂಪಾಯಿಗಳ ಚೆಕ್‌ ಅನ್ನು ವೀರ ಯೋಧರ ಸೇವೆಗಾಗಿ ದೇಣಿಗೆಯಾಗಿ  ನೀಡಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಸರ್ಕಾರದ ಅಧಿಕೃತ ನಿಧಿಯಾದ ‘ಭಾರತ್ ಕೆ ವೀರ್’ (Bharat Ke Veer Corpus Fund) ಗೆ ಈ ಮೊತ್ತವನ್ನು ಅರ್ಪಿಸಲಾಗಿದ್ದು, ಈ 10 ಲಕ್ಷ ರೂಪಾಯಿಗಳ ಚೆಕ್ ಅನ್ನು ಕೇಂದ್ರ ಸರ್ಕಾರದ ನಿಧಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ಕರಿಬಸಮ್ಮ ಅವರು ದೇಶದ ವೀರ ಯೋಧರ ಕಲ್ಯಾಣಕ್ಕಾಗಿ ಆರ್ಥಿಕ ನೆರವು ನೀಡಬೇಕೆಂಬ ಸುದೀರ್ಘ ವರ್ಷಗಳ ಕನಸನ್ನು ಹೊಂದಿದ್ದರು. ಈ ಕುರಿತು ಅವರ ವಿದ್ಯಾರ್ಥಿಗಳು ಜಿಲ್ಲಾಡಳಿತದೊಂದಿಗೆ ಚರ್ಚಿಸಿ, ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು. ಶಿಕ್ಷಕರ ಈ ಅಪೇಕ್ಷೆಯಂತೆ, ನಿವೃತ್ತ ಶಿಕ್ಷಕರ ಈ ದೇಶಪ್ರೇಮ ಹಾಗೂ ಉದಾತ್ತ ಕಾರ್ಯಕ್ಕೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯ ನಂತರ ಕರಿಬಸಮ್ಮ ಅವರು ಮಾತನಾಡಿ, ಸುಮಾರು 50 ವರ್ಷಗಳ ಹಿಂದೆ ಕೇವಲ ರೇಡಿಯೋಗಳಷ್ಟೇ ಇದ್ದ ಕಾಲದಲ್ಲಿ, ಗಡಿಯಲ್ಲಿ ಕಠಿಣ ಪರಿಸ್ಥಿತಿಯಲ್ಲಿ ದೇಶ ಕಾಯುವ ಸೈನಿಕರ ಕಷ್ಟಗಳ ಬಗ್ಗೆ ಕೇಳಿ ಮನನೊಂದಿದ್ದರು. ತಮ್ಮ ಹೆಂಡತಿ, ಮಕ್ಕಳು ಹಾಗೂ ವಯಸ್ಸಾದ ತಂದೆ-ತಾಯಿಯರ ಯೋಗಕ್ಷೇಮ ವಿಚಾರಿಸಲು ಕಡಿದಾದ ಬೆಟ್ಟ-ಗುಡ್ಡಗಳಿಂದ ಮೈಲುಗಟ್ಟಲೆ ನಡೆದು ಬರುವ ಸೈನಿಕರ ಪರಿಸ್ಥಿತಿ ನನ್ನ ಮನಸ್ಸನ್ನು ಕಲಕಿತ್ತು. ಅಂದಿನಿಂದಲೇ “ದೇಶಕ್ಕಾಗಿ ನಾನೇನಾದರೂ ಸೇವೆ ಮಾಡಬೇಕಲ್ಲವೇ?” ಎಂಬ ಭಾವನೆ ನನ್ನಲ್ಲಿ ಮೂಡಿತ್ತು. ನಂತರದ ದಿನಗಳಲ್ಲಿ ಅವರು ‘ದಯಾಮರಣ’ದ ಹೋರಾಟಕ್ಕೆ ಧುಮುಕಿದಾಗ ಹಣದ ಅವಶ್ಯಕತೆ ಎದುರಾಯಿತು ಎಂದರು.

ದಾವಣಗೆರೆಯ ಅನೇಕ ಗಣ್ಯರು ಹಣದ ಸಹಾಯ ಮಾಡಲು ಮುಂದೆ ಬಂದರೂ, ಅವರು ಯಾರಿಂದಲೂ ನಯಾಪೈಸೆ ಸ್ವೀಕರಿಸದೆ, ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿದರು. ಮನೆ ಮಾರಿದಾಗ ಬಂದ ಹಣದಲ್ಲಿ 6 ಲಕ್ಷ ರೂಪಾಯಿಗಳನ್ನು ಬಿ.ಎಸ್.ಎಫ್ ನಿಧಿಗಾಗಿ ಮೀಸಲಿಟ್ಟಿದ್ದೆ, ಆ ಹಣವನ್ನು ಹಾಗೆಯೇ ಉಳಿಸಿಕೊಂಡು ಮತ್ತು ನನ್ನ ಪಿಂಚಣಿ ಹಣದಿಂದ ಪ್ರಸ್ತುತ ಆ ಮೊತ್ತವು ಬಡ್ಡಿಯೂ ಸೇರಿ ಒಟ್ಟು 10 ಲಕ್ಷ ರೂಪಾಯಿಗಳಾಗಿದ್ದು, ಅದನ್ನು ಸಂಪೂರ್ಣವಾಗಿ ದೇಶದ ಸೈನಿಕರ ನಿಧಿಗೆ ನೀಡಲು ನಿರ್ಧರಿಸಿದ್ದೆ ಎಂದರು.

ನಿರಂತರ ಹೋರಾಟಗಳ ಪರಿಣಾಮವಾಗಿ ನನಗೆ ಬಿಪಿ, ಶುಗರ್, ಪೆಪ್ಟಿಕ್ ಅಲ್ಸರ್ ಹಾಗೂ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಿದ್ದೆ. ಅನಾರೋಗ್ಯದ ಏರುಪೇರಿನ ನಡುವೆಯೂ ಸೈನಿಕರಿಗೆ ಸಹಾಯ ಮಾಡಬೇಕೆಂಬ ನನ್ನ ಸಂಕಲ್ಪ ಮಾತ್ರ ಕುಗ್ಗಿಲ್ಲ. “ನನ್ನ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದರಿಂದ, ಆದಷ್ಟು ಬೇಗ ಈ ಹಣವನ್ನು ದೇಶಕ್ಕೆ ಒಪ್ಪಿಸಿ ಋಣಮುಕ್ತಳಾಗಬೇಕೆಂಬುದು ನನ್ನ ಆಸೆ. ಈ ಹಣವನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ, ಬಿ.ಎಸ್.ಎಫ್ ನಿಧಿಗೆ ಹಸ್ತಾಂತರಿಸಲಾಗುವುದು. ಇದು ನನಗೆ ಅಪಾರ ಸಂತೋಷವನ್ನು ತಂದಿದೆ” ಎಂದು ತಿಳಿಸಿದರು.

ಕರಿಬಸಮ್ಮ ಅವರ ಶಿಷ್ಯಂದಿರು ಆದ ಮಾಜಿ ವಿಧಾನಪರಿಷತ್‌ ಸದಸ್ಯ ಡಾ.ಶಿವಯೋಗಿಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular