ಬೆಂಗಳೂರು: 21ನೇ ಜೂನ್ 2026ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೆಟ್ರೋ ರೈಲು ಸೇವೆ ಬೆಳಿಗ್ಗೆ 5 ಗಂಟೆಯಿಂದ ಆರಂಭವಾಗಲಿದೆ ಎಂದು BMRCL ತಿಳಿಸಿದೆ.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿರುವ ಯೋಗ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಸುಲಭವಾಗಿ ಭಾಗವಹಿಸಲು ಅನುಕೂಲವಾಗುವಂತೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿ.ಎಂ.ಆರ್.ಸಿ.ಎಲ್.) ವಿಶೇಷವಾಗಿ ಮೆಟ್ರೋ ರೈಲು ಸೇವೆಯನ್ನು ಮುಂಜಾನೆ ಆರಂಭಿಸಲು ನಿರ್ಧರಿಸಿದೆ.
ಸಾಮಾನ್ಯವಾಗಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗುವ ಮೆಟ್ರೋ ರೈಲು ಸೇವೆಯ ಬದಲಾಗಿ, 21ನೇ ಜೂನ್ 2026ರಂದು ಬೆಳಿಗ್ಗೆ 5:00 ಗಂಟೆಯಿಂದಲೇ ಎಲ್ಲಾ ಮೆಟ್ರೋ ಮಾರ್ಗದ ಟರ್ಮಿನಲ್ ನಿಲ್ದಾಣಗಳಿಂದ ವಾಣಿಜ್ಯ ಸೇವೆಗಳು ಆರಂಭವಾಗಲಿವೆ.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುವ ಸಾರ್ವಜನಿಕರು ಈ ವಿಶೇಷ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಹಾಗೂ ತಮ್ಮ ಪ್ರಯಾಣವನ್ನು ಅನುಕೂಲಕರವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿಕೊಳ್ಳುತ್ತದೆ.
ಆರೋಗ್ಯಕರ ಮತ್ತು ಉತ್ಸಾಹಭರಿತ ಜೀವನಶೈಲಿಯತ್ತ ಹೆಜ್ಜೆ ಇಡುವ ಈ ಮಹತ್ವದ ದಿನದಂದು, ಸಾರ್ವಜನಿಕರೆಲ್ಲರೂ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.

