ನವದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಕ್ಷನ್ ಮೋಡ್ಗೆ ಇಳಿದಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭರ್ಜರಿ ರಾಜತಾಂತ್ರಿಕ ಬೇಟೆ ಮುಂದುವರಿಸಿದ್ದಾರೆ ನೀತಿ ಆಯೋಗದ ಸಭೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದಾಗಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.
ದೆಹಲಿಯ ಕರ್ತವ್ಯ ಭವನದಲ್ಲಿ ನಡೆದ ಈ ಹೈ-ಪ್ರೊಫೈಲ್ ಮೀಟಿಂಗ್ನಲ್ಲಿ, ಕರ್ನಾಟಕ ಪೊಲೀಸ್ ಇಲಾಖೆಯ ಸಾಮರ್ಥ್ಯ ಮತ್ತು ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣ ಮೇಲ್ದರ್ಜೆಗೆ ಏರಿಸಲು ಬರೋಬ್ಬರಿ ಒಂಭತ್ತು ಪ್ರಮುಖ ಬೇಡಿಕೆಗಳ ಮೆಗಾ ಪ್ರಸ್ತಾವನೆಯನ್ನು ಅಮಿತ್ ಶಾ ಕೈಗಿಟ್ಟಿದ್ದಾರೆ
ಅಮಿತ್ ಶಾ ಮುಂದೆ ಸಿಎಂ ಡಿಕೆಶಿ ಇಟ್ಟ ಆ 9 ಪ್ರಮುಖ ಬೇಡಿಕೆಗಳು ಇಲ್ಲಿವೆ:
ಪ್ರೆಸಿಡೆಂಟ್ಸ್ ಕಲರ್ ಅತ್ಯುನ್ನತ ಗೌರವ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸಿಗಬೇಕಾದ ಪ್ರತಿಷ್ಠಿತ ಪ್ರೆಸಿಡೆಂಟ್ಸ್ ಕಲರ್ (ರಾಷ್ಟ್ರಪತಿಗಳ ಅತ್ಯುನ್ನತ ಗೌರವ) ಪ್ರಶಸ್ತಿಯ ಪ್ರಸ್ತಾವನೆ ಕೇಂದ್ರದಲ್ಲಿ ಬಾಕಿ ಉಳಿದಿದ್ದು, ಅದನ್ನು ಶೀಘ್ರವಾಗಿ ಮಂಜೂರು ಮಾಡಲು ಒತ್ತಾಯಿಸಿದ್ದಾರೆ.
ವಿಜಯನಗರ, ರಾಮನಗರಕ್ಕೆ ಹೊಸ ಬೆಟಾಲಿಯನ್ :
ಈ ಎರಡು ಜಿಲ್ಲೆಗಳಲ್ಲಿ ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRBs) ಸ್ಥಾಪಿಸಲು ₹243.87 ಕೋಟಿ ವೆಚ್ಚದ ಹೊಸ ಯೋಜನೆಗೆ ತಕ್ಷಣದ ಒಪ್ಪಿಗೆ ಕೋರಿದ್ದಾರೆ.
ಮೆಗಾ ಸಿಟಿಗಳಿಗೆ ₹280 ಕೋಟಿ ಫಂಡ್ :
ರಾಜ್ಯದ ನಾಲ್ಕು ಪ್ರಮುಖ ನಗರಗಳಲ್ಲಿ ಹೈಟೆಕ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ಗಳು ಹಾಗೂ ಸುಧಾರಿತ ಸಂವಹನ ಉಪಕರಣಗಳ ಸ್ಥಾಪನೆಗಾಗಿ ASUMP ಯೋಜನೆಯಡಿ ಅನುಮೋದನೆ ಕೇಳಿದ್ದಾರೆ.
ಪೊಲೀಸ್ ಇಲಾಖೆಗೆ ಕಾರ್ಪೊರೇಟ್ (CSR) ಹಣದ ಭಾಗ್ಯ :
ಕಂಪನಿಗಳ ಕಾಯ್ದೆ 2013 ರ ಅಡಿಯಲ್ಲಿ ಪೊಲೀಸ್ ಚಟುವಟಿಕೆಗಳನ್ನು ಸೇರಿಸುವ ಮೂಲಕ, ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಪೊಲೀಸ್ ವ್ಯವಸ್ಥೆಗೆ ಬಳಸಲು ಅನುಮತಿ ಕೋರಿದ್ದಾರೆ.
ಪೊಲೀಸ್ ತರಬೇತಿ ಸಂಸ್ಥೆಗಳ ಅಪ್ಗ್ರೇಡ್ಗೆ ₹258.53 ಕೋಟಿ :
BPR&D ಮಾರ್ಗಸೂಚಿಗಳ ಗ್ಯಾಪ್ ಅನಾಲಿಸಿಸ್ ಪ್ರಕಾರ ರಾಜ್ಯದ ಪೊಲೀಸ್ ಟ್ರೈನಿಂಗ್ ಸೆಂಟರ್ಗಳ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸಲು ಅನುಮೋದನೆ ಕೋರಿದ್ದಾರೆ.
ಹೈಟೆಕ್ ಜೈಲುಗಳ ನಿರ್ಮಾಣಕ್ಕೆ ₹20 ಕೋಟಿ :
ರಾಜ್ಯದ ಕಾರಾಗೃಹಗಳ ಆಧುನೀಕರಣ ಯೋಜನೆಯಡಿ ಸಿಸಿಟಿವಿ, ವಾಕಿ-ಟಾಕಿ ಮತ್ತು ಹೈ-ಸೆಕ್ಯುರಿಟಿ ಉಪಕರಣಗಳ ಖರೀದಿಗೆ 2025-26ರ ಸಾಲಿನ ಹಣ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಮೋಟಾರು ವಾಹನ ನಿಯಮ 52-A ಗಡುವು ವಿಸ್ತರಣೆ :
ಕರ್ನಾಟಕದಲ್ಲಿ ಕೇಂದ್ರ ಮೋಟಾರು ವಾಹನಗಳ ನಿಯಮ 52-A ಅನುಷ್ಠಾನಕ್ಕೆ ಕಾಲಾವಕಾಶ ವಿಸ್ತರಿಸುವಂತೆ ಸಂಬಂಧಪಟ್ಟ ಸಚಿವಾಲಯದೊಂದಿಗೆ ಚರ್ಚಿಸಲು ವಿನಂತಿಸಿದ್ದಾರೆ.
ಪೊಲೀಸ್ ಠಾಣೆಗಳ CCTVಗೆ ₹278.26 ಕೋಟಿ :
ಸುಪ್ರೀಂ ಕೋರ್ಟ್ ಮುಂದೆ ನಡೆದ ಚರ್ಚೆಗಳ ಅನುಸಾರ, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅತ್ಯಾಧುನಿಕಗೊಳಿಸಲು ದೊಡ್ಡ ಮೊತ್ತದ ಪ್ರಸ್ತಾವನೆ ಇಟ್ಟಿದ್ದಾರೆ.
₹360 ಕೋಟಿ ವೆಚ್ಚದ ಮೆಗಾ ಸೈಬರ್ ಯುನಿಟ್ (K4C) :
ಸಮಾಜ ಮತ್ತು ರಾಷ್ಟ್ರೀಯ ಭದ್ರತೆಗೆ ಸವಾಲಾಗಿರುವ ಸೈಬರ್ ಕ್ರೈಂ ತಡೆಯಲು ಬರೋಬ್ಬರಿ 360 ಕೋಟಿ ರೂಪಾಯಿ ವೆಚ್ಚದಲ್ಲಿ ‘ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್’ (K4C) ಸ್ಥಾಪನೆಗೆ ಕೇಂದ್ರದ ಸಕಾರಾತ್ಮಕ ಸಹಕಾರ ಕೋರಿದ್ದಾರೆ.

