HomeLatest NewsBREAKING : ಬೆಂಗಳೂರಲ್ಲಿ 6 ವರ್ಷದ ಬಾಲಕಿ ವೆನ್ನಿಲಾ ಕೊಲೆ ಕೇಸ್ ; ಕಾಡುಗೋಡಿ ಠಾಣೆಯ...

BREAKING : ಬೆಂಗಳೂರಲ್ಲಿ 6 ವರ್ಷದ ಬಾಲಕಿ ವೆನ್ನಿಲಾ ಕೊಲೆ ಕೇಸ್ ; ಕಾಡುಗೋಡಿ ಠಾಣೆಯ ಇನ್ಸ್ಪೆಕ್ಟರ್ ಸೇರಿ ಮೂವರು ಸಸ್ಪೆಂಡ್

ಬೆಂಗಳೂರು :  ಬೆಂಗಳೂರು ನಗರದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 6 ವರ್ಷದ ಬಾಲಕಿ ವೆನ್ನಿಲಾ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಕಾಡುಗೋಡಿ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ತನಿಖೆಯ ಪ್ರಗತಿ ಹಾಗೂ ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದವು.

ಅಮಾನತುಗೊಂಡವರಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಂಗಸ್ವಾಮಿ, ಪಿಎಸ್‌ಐ ನಿಂಗರಾಜು ಹಾಗೂ ಪ್ರಕರಣದ ತನಿಖಾಧಿಕಾರಿಗೆ ಅಸಿಸ್ಟೆಂಟ್ ಆದ ಮತ್ತೋರ್ವ ಪೊಲೀಸ್ ಸಿಬ್ಬಂದಿಯನ್ನು ಕೂಡ ಅಮಾನತು ಮಾಡಲಾಗಿದೆ.ಪ್ರಕರಣದ ಆರಂಭಿಕ ಹಂತದಲ್ಲಿ ಸೂಕ್ತ ತನಿಖೆ ನಡೆಸದಿರುವುದು ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪಗಳ ಹಿನ್ನೆಲೆಯಲ್ಲಿ ಇಲಾಖೆಯು ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಆರು ವರ್ಷದ ವೆನ್ನಿಲಾ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಬಳಿಕ ಕೊಲೆ ಪ್ರಕರಣವಾಗಿ ಪರಿವರ್ತನೆಯಾಗಿದ್ದು, ತನಿಖೆಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ಬೆಳಕಿಗೆ ಬಂದಿವೆ. ಬಾಲಕಿಯ ತಾಯಿ ಹಾಗೂ ಆಕೆಯ ಆಪ್ತನನ್ನು ಪೊಲೀಸರು ಬಂಧಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಲು ಉನ್ನತ ಮಟ್ಟದ ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದು ಪ್ರಕರಣ..?

ಬೆಂಗಳೂರು ಕಾಡುಗೋಡಿ ವ್ಯಾಪ್ತಿಯಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ 6 ವರ್ಷದ ಬಾಲಕಿ ವೆನ್ನೆಲಾ ಸಾವಿನ ಪ್ರಕರಣ ಇದೀಗ ಬೆಚ್ಚಿಬೀಳಿಸುವ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ದಾಖಲಾಗಿದ್ದ ಪ್ರಕರಣದಲ್ಲಿ, ಪೊಲೀಸರ ತನಿಖೆ ಬಳಿಕ ಇದು ಕೊಲೆ ಎಂಬುದು ಬಹಿರಂಗವಾಗಿದ್ದು, ಬಾಲಕಿಯ ತಾಯಿ ಪ್ರಿಯಾಂಕಾ ಹಾಗೂ ಆಕೆಯ ಆಪ್ತ ಸ್ನೇಹಿತ ಮೋಹನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಪೊಲೀಸರ ತನಿಖೆ ಪ್ರಕಾರ, ವೆನ್ನೆಲಾ ತನ್ನ ತಾಯಿ ಮತ್ತು ಮೋಹನ್ ಅವರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾಳೆ ಎಂಬ ಕಾರಣಕ್ಕೆ ಬಾಲಕಿಯನ್ನು ನಿರಂತರವಾಗಿ ಹಿಂಸಿಸಲಾಗುತ್ತಿತ್ತು ಎನ್ನಲಾಗಿದೆ. ಘಟನೆ ನಡೆದ ದಿನ ಐಸ್‌ಕ್ರೀಂ ವಿಚಾರವಾಗಿ ಬಾಲಕಿ ಅಳಲು ಆರಂಭಿಸಿದಾಗ ಮೋಹನ್ ಆಕೆಯ ಹೊಟ್ಟೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ಆಕೆಯ ಅಳುವನ್ನು ನಿಲ್ಲಿಸುವ ಉದ್ದೇಶದಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ನಡೆದ ಬಳಿಕ ಇಬ್ಬರೂ ಸುಮಾರು 12 ಗಂಟೆಗಳ ಕಾಲ ಬಾಲಕಿಯ ಮೃತದೇಹದೊಂದಿಗೆ ನಗರದಲ್ಲಿ ಸುತ್ತಾಡಿ, ಬಳಿಕ ಸಹಜ ಸಾವು ಎಂಬಂತೆ ಬಿಂಬಿಸಲು ಯತ್ನಿಸಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ. ಆರಂಭದಲ್ಲಿ ಬಾಲಕಿ ಬಿರಿಯಾನಿ ಮತ್ತು ಐಸ್‌ಕ್ರೀಂ ಸೇವಿಸಿ ಕಾರಿನಲ್ಲಿ ಮಲಗಿದ್ದಾಗ ಸಾವನ್ನಪ್ಪಿದ್ದಾಳೆ ಎಂದು ತಾಯಿ ಹೇಳಿಕೆ ನೀಡಿದ್ದಳು. ಆದರೆ ಹೇಳಿಕೆಗಳಲ್ಲಿ ಕಂಡುಬಂದ ವ್ಯತ್ಯಾಸಗಳು ಅನುಮಾನಕ್ಕೆ ಕಾರಣವಾಗಿದ್ದವು.

ಬಾಲಕಿಯ ತಂದೆ ಪ್ರವೀಣ್ ಬಸಪ್ಪ ಅವರು ಮರಣೋತ್ತರ ಪರೀಕ್ಷಾ ವರದಿಯ ಕುರಿತು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣದ ಮರು ತನಿಖೆ ಆರಂಭಗೊಂಡಿತು. ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಮುಖ ಆರೋಪಿ ಮೋಹನ್ ಬಂಧನಕ್ಕೊಳಗಾಗಿದ್ದು, ತಾಯಿ ಪ್ರಿಯಾಂಕಾಳನ್ನು ಪೊಲೀಸರು ಬಳಿಕ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲಕಿಯ ಮೇಲಿನ ಅಮಾನುಷ ಕೃತ್ಯ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular