ನಿನ್ನೆ ( ಜೂನ್ 11 ) ಢಾಕಾದಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳ ಗೆಲುವನ್ನು ದಾಖಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕೈವಶಪಡಿಸಿಕೊಂಡಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಳೆ ಬಂದ ಕಾರಣ 42 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 187 ರನ್ ದಾಖಲಿಸಿತು. ಮಳೆಯ ಕಾರಣ ಬಾಂಗ್ಲಾದೇಶಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 41 ಓವರ್ಗಳಲ್ಲಿ 192 ರನ್ ಬಾರಿಸಬೇಕಾಯಿತು. ಬಾಂಗ್ಲಾದೇಶ 35 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಸರಣಿಯನ್ನು ವಶಪಡಿಸಿಕೊಂಡಿತು.
ಇದಕ್ಕೂ ಮುನ್ನ ಪಾಕಿಸ್ತಾನ ಪ್ರವಾಸ ಕೈಗೊಂಡು 1-2 ಅಂತರದಲ್ಲಿ ಏಕದಿನ ಸರಣಿ ಸೋತಿದ್ದ ಆಸ್ಟ್ರೇಲಿಯಾ ಸದ್ಯ ಬಾಂಗ್ಲಾದೇಶದ ವಿರುದ್ಧವೂ ಸರಣಿ ಸೋತಿದ್ದು ಕೆಟ್ಟ ಪರಿಸ್ಥಿತಿಯಲ್ಲಿದೆ.
ಇನ್ನು ಎರಡೂ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆ ಉತ್ತಮ ಆಟವನ್ನಾಡುವಲ್ಲಿ ವಿಫಲವಾಗಿದ್ದು, ತಂಡಕ್ಕೆ ಬ್ಯಾಟಿಂಗ್ ವಿಭಾಗದ ತಲೆನೋವು ಶುರುವಾಗಿದೆ. ಅದರಲ್ಲೂ ನಿನ್ನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಯಾವುದೇ ರನ್ ಗಳಿಸದೇ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ಹೀನಾಯ ಆರಂಭ ಪಡೆದುಕೊಂಡಿತು.
ಮ್ಯಾಥ್ಯೂ ಶಾರ್ಟ್, ಕೂಪರ್ ಕೊನೊಲ್ಲಿ ಹಾಗೂ ಮ್ಯಾಟ್ ರೆನ್ಷಾ ಮೂವರೂ ಸಹ ಡಕ್ಔಟ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಹಾಲಿ ವಿಶ್ವಕಪ್ ಚಾಂಪಿಯನ್ನರಾದ ಆಸ್ಟ್ರೇಲಿಯಾ ಬ್ಯಾಟಿಂಗ್ ವಿಭಾಗದ ಈ ಕೆಳಮಟ್ಟದ ಪ್ರದರ್ಶನ ಕಂಡು ನೆಟ್ಟಿಗರು ಟೀಕಾಪ್ರಹಾರ ಮಾಡಿದ್ದು, ಆಸ್ಟ್ರೇಲಿಯಾ ಮುಗಿದ ಅಧ್ಯಾಯ ಎನ್ನುತ್ತಿದ್ದಾರೆ. 0 ರನ್ಗೆ 3 ವಿಕೆಟ್ ಕ್ರಿಕೆಟ್ ಸ್ಕೋರ್ಬೋರ್ಡಾ ಇಲ್ಲ ಫುಟ್ ಬಾಲ್ ಸ್ಕೋರ್ಬೋರ್ಡಾ ಎಂದು ವ್ಯಂಗ್ಯವಾಡಿದ್ದಾರೆ.

