ಬೆಂಗಳೂರು: ಪೆಟ್ರೋಲ್, ಡೀಸೆಲ್, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಇದೀಗ ಅಕ್ಕಿ ದರ ಕೂಡ ಹೆಚ್ಚಾಗಿದ್ದು, ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿತ ಜನತೆಗೆ ಬಿಸಿ ತಟ್ಟಿದೆ.
ಪ್ರತಿ ಕೆಜಿ ಅಕ್ಕಿ ದರ 6ರಿಂದ 10 ರೂ.ನಷ್ಟು ಏರಿಕೆಯಾಗಿದೆ. 25 -26 ಕೆಜಿ ಚೀಲಕ್ಕೆ 150 ರೂಪಾಯಿಯಷ್ಟು ದರ ಏರಿಕೆಯಾಗುವ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಅಕ್ಕಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ.
ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಅವಕಾಶ ನೀಡಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಮುಂದಿನ ನವೆಂಬರ್ ವರೆಗೂ ಅಕ್ಕಿ ಕೊರತೆ ಮುಂದುವರೆಯುವ ಸಾಧ್ಯತೆ ಇದೆ.
10 ದಿನಗಳ ಹಿಂದೆಯೇ ಅಕ್ಕಿ ದರ ಏರಿಕೆಯಾಗಿದ್ದು, 26 ಕೆಜಿ ಚೀಲಕ್ಕೆ ಕನಿಷ್ಠ 150 ರೂಪಾಯಿ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಕ್ಕಿ ದರ ಕೆಜಿಗೆ ಒಂದರಿಂದ ಎರಡು ರೂ.ನಷ್ಟು ಹೆಚ್ಚಾಗುತ್ತಿತ್ತು. ಈ ಬಾರಿ ಮಧ್ಯ ಪ್ರಾಚ್ಯ ಸಂಘರ್ಷ ಸೇರಿದಂತೆ ಜಾಗತಿಕ ಬೆಳವಣಿಗೆಗಳ ಕಾರಣದಿಂದ ಇಂಧನದ ರೀತಿ ಅಕ್ಕಿ ದರ ಕೂಡ ಹೆಚ್ಚಾಗಿದೆ.
ಸೋನಾ ಸ್ಟೀಮ್ ರೈಸ್ ದರ ಕೆಜಿಗೆ 43 ರೂ.ನಿಂದ 49 ರೂ.ಗೆ ಏರಿಕೆಯಾಗಿದೆ. ಸೋನಾ ರಾ ರೈಸ್ 52 ರೂ. ನಿಂದ 59 ರೂ.ಗೆ ಏರಿಕೆಯಾಗಿದೆ. ಅದೇ ರೀತಿ ವಿವಿಧ ಮಾದರಿ ಅಕ್ಕಿ ದರ ಕೂಡ ಏರಿಕೆಯಾಗಿದೆ.

