ಹಾವೇರಿ : ಹಾವೇರಿಯಲ್ಲಿ ಸ್ವಯಂ ಉದ್ಯೋಗ ಹಾಗೂ ಮನೆಯಿಂದಲೇ ಪ್ಯಾಕಿಂಗ್ ಕೆಲಸ ನೀಡುವುದಾಗಿ ನಂಬಿಸಿ ನೂರಾರು ಮಹಿಳೆಯರಿಂದ ಸುಮಾರು ₹10 ಕೋಟಿ ಹಣ ಸಂಗ್ರಹಿಸಿದ ದಂಪತಿ ಕಚೇರಿಗೆ ಬೀಗ ಹಾಕಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಹಣ ಕಳೆದುಕೊಂಡ ಮಹಿಳೆಯರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹೌದು. ಸ್ವಯಂ ಉದ್ಯೋಗ ಹಾಗೂ ಮನೆಯಿಂದಲೇ ಕೆಲಸ ನೀಡುವುದಾಗಿ ನಂಬಿಸಿ ನೂರಾರು ಮಹಿಳೆಯರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚನೆ ಎಸಗಿದ ಆರೋಪದಡಿ ದಂಪತಿಯೊಂದು ಪರಾರಿಯಾಗಿರುವ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ನಗರದ ಅಶ್ವಿನಿ ನಗರದಲ್ಲಿ ‘ಎಸ್ಎಲ್ವಿ ಮಹಿಳಾ ಮಾರ್ಟ್ ಅಂಡ್ ಮಾರ್ಕೆಟಿಂಗ್’ ಹೆಸರಿನಲ್ಲಿ ಕಚೇರಿ ತೆರೆದಿದ್ದ ಆರೋಪಿಗಳು, ಉತ್ತಮ ಆದಾಯದ ಭರವಸೆ ನೀಡಿ ಸುಮಾರು ₹10 ಕೋಟಿ ವಂಚನೆ ನಡೆಸಿರುವ ಆರೋಪ ಕೇಳಿಬಂದಿದೆ.
ವಿನಾಯಕ ಅನ್ವೇರಿ ಹಾಗೂ ರಮ್ಯಾ ಎಂಬ ದಂಪತಿ ಅಗರಬತ್ತಿ, ಮೇಣದ ಬತ್ತಿ, ಕರ್ಪೂರ ಹಾಗೂ ಇತರೆ ಉತ್ಪನ್ನಗಳ ಪ್ಯಾಕಿಂಗ್ ಕೆಲಸವನ್ನು ಮನೆಯಿಂದಲೇ ಮಾಡಬಹುದು ಎಂದು ಹೇಳಿ ಮಹಿಳೆಯರನ್ನು ಸೆಳೆದಿದ್ದರು. ಈ ಕೆಲಸಕ್ಕಾಗಿ ₹25 ಸಾವಿರದಿಂದ ₹5 ಲಕ್ಷದವರೆಗೆ ಠೇವಣಿ ಇಡಬೇಕೆಂದು ಸೂಚಿಸಿ, ಒಂದು ಲಕ್ಷ ರೂಪಾಯಿ ಹೂಡಿಕೆಗೆ ಪ್ರತಿ ತಿಂಗಳು ₹26 ಸಾವಿರ ಆದಾಯ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಆದರೆ, ಹಣ ಸಂಗ್ರಹಿಸಿದ ಬಳಿಕ ಕಚೇರಿಗೆ ಬೀಗ ಹಾಕಿ ಆರೋಪಿಗಳು ನಾಪತ್ತೆಯಾಗಿದ್ದು, ತಮ್ಮ ಹಣ ಕಳೆದುಕೊಂಡ ನೂರಾರು ಮಹಿಳೆಯರು ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಆರೋಪಿಗಳು ಸುಮಾರು ₹10 ಕೋಟಿ ವಂಚನೆ ನಡೆಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದು, ಹಣ ಮರಳಿ ದೊರಕುವಂತೆ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಘಟನೆಯ ಕುರಿತು ದೂರು ದಾಖಲಾಗಿದ್ದು, ಪರಾರಿಯಾಗಿರುವ ದಂಪತಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

