ನವದೆಹಲಿ: ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಹಣ ಸಿಗುವ ಕೆಲಸವಾಗುತ್ತಿದೆ. ಯೋಜನೆ ಬಗ್ಗೆ ಎಲ್ಲವನ್ನು ಪರಿಶೀಲನೆ ಮಾಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯನ್ನು ಪರಿಶೀಲಿಸಲಾಗುವುದು. ಪರಿಶೀಲನೆ ಸಂದರ್ಭದಲ್ಲಿ ಕೆಲವು ಕಡೆ ಬೇರೆ ಫೋನ್ ನಂಬರ್ ಕೊಟ್ಟಿದ್ದಾರೆ. ಯಾರದೋ ನಂಬರ್ ಗೆ ಯಾರದೋ ಖಾತೆ ಲಿಂಕ್ ಮಾಡಲಾಗಿದೆ. ಅನೇಕ ಲೋಪಗಳು ಕಂಡುಬಂದಿದ್ದು, ಹೊಸದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಾನು ಒಬ್ಬ ಕಾಂಗ್ರೆಸ್ ಕಾರ್ಯಕರ್ತ. ಕ್ಯಾಬಿನೆಟ್ ಬಗ್ಗೆ ಎಲ್ಲವನ್ನು ಹೇಳಲು ಆಗುವುದಿಲ್ಲ. ನಾನು ಏನು ಮಾತನಾಡಬೇಕೋ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಕಸದ ಟೆಂಡರ್ ನಲ್ಲಿ 36,000 ಕೋಟಿ ರೂ. ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಡಿ.ಕೆ. ಶಿವಕುಮಾರ್ ತನಿಖೆಗೆ ಸಿದ್ಧವೆಂದು ಹೇಳಿದ್ದಾರೆ.
ಕಸದ ಹೆಸರಿನಲ್ಲಿ 36,000 ಕೋಟಿ ರೂ ಹಗರಣ ಆರೋಪದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಏನು ಬೇಕಾದರೂ ತನಿಖೆ ಮಾಡಲಿ. ಹತ್ತರಿಂದ ಹನ್ನೆರಡು ವರ್ಷ ಕಸದ ಟೆಂಡರ್ ಕರೆಯಲು ಬಿಡಲಿಲ್ಲ. ಬಿಜೆಪಿಯವರು ಅಸೂಯೆ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಆಡಳಿತ ನೋಡಿ ಅವರಿಗೆ ಸಹಿಸುವುದಕ್ಕೆ ಆಗುತ್ತಿಲ್ಲ ಎಂದು ದೂರಿದ್ದಾರೆ.

