ಮುಂಡಗೋಡು: ಜೇನು ಹುಳುಗಳ ದಾಳಿಯಿಂದಾಗಿ 21 ವಿದ್ಯಾರ್ಥಿಗಳು ಗಾಯಗೊಂಡು ಅಸ್ವಸ್ಥರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಇಲ್ಲಿನ ಕರಿಗಿನಕೊಪ್ಪ ಮುರಾರ್ಜಿದೇವಾಸಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ ಊಟದ ವೇಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತರಗತಿಯಿಂದ ಹೊರಬಂದಿದ್ದರು. ಈ ವೇಳೆ ಶಾಲೆಯ ಎರಡನೇ ಮಹಡಿಯಲ್ಲಿದ್ದ ಜೇನುಗೂಡಿಗೆ ವಿದ್ಯಾರ್ಥಿಯೊಬ್ಬ ಕಲ್ಲು ಹೊಡೆದಿದ್ದಾನೆ. ಕಲ್ಲು ಹೊಡೆಯುತ್ತಿದ್ದಂತೆ ವಿಚಲಿತಗೊಂಡ ಜೇನುಗಳು ಏಕಾಏಕಿ ದಾಳಿ ನಡೆಸಲಾರಂಭಿಸಿವೆ.
ವಿದ್ಯಾರ್ಥಿಗಳ ಮೇಲೆ ಜೇನು ದಾಳಿ ನಡೆಸಿದ್ದು, 21 ವಿದ್ಯಾರ್ಥಿಗಳು ಗಾಯಗೊಂಡು ಅಸ್ವಸ್ಥರಾಗಿದ್ದಾರೆ. ಗಾಯಾಳು ವಿದ್ಯಾರ್ಥಿಗಳನ್ನು ಮುಂಡಗೋಡು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

