ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮೊದಲ ಹಂತದ ಸಚಿವ ಸಂಪುಟ ರಚನೆಯಾಗಿದ್ದು, ಖಾತೆ ಹಂಚಿಕೆ ಕೂಡ ಮಾಡಲಾಗಿದೆ. ಆದರೆ ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿದ್ದ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ, ಬಳಿಕ ರಾಜೀನಾಮೆ ಹಿಂಪಡೆದ ಬೆಳವಣಿಗೆ ಬೆನ್ನಲ್ಲೇ ಕೆ.ಹೆಚ್.ಮುನಿಯಪ್ಪ ತಮಗೆ ಆಹಾರ ಖಾತೆ ಬೇಡ ಸಹಕಾರ ಹಾಗೂ ಕೃಷಿ ಖಾತೆ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಸಚಿವ ಕೃಷ್ಣಬೈರೇಗೌಡ ಕೂಡ ತಮಗೆ ದೊರೆತಿರುವ ನಗರಾಭಿವೃದ್ಧಿ ಖಾತೆ ವಿಚಾರವಾಗಿ ಅಸಮಾಧಾನಗೊಂಡಿದ್ದಾರೆ. ಬಿಡಿಎ, ಬಿಎಂಆರ್ ಡಿ ಇಲ್ಲವೆಂದರೆ ತಾವು ಇಲಾಖೆ ಅಧಿಕಾರ ವಹಿಸಿಕೊಳ್ಳಲ್ಲ ಎಂದು ದೆಹಲಿಗೆ ತೆರಳಿದ್ದಾರೆ.
ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಸಚಿವರ ಖ್ಯಾತೆ ಕ್ಯಾತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಈಗ ಕೃಷ್ಣಬೈರೇಗೌಡರ ಸರದಿ. ನಗರಾಭಿವೃದ್ಧಿಯಲ್ಲಿ BDA, BMRDA ಇಲ್ಲದಿದ್ದರೆ ಖಾತೆ ಬೇಡ. ನಾನು ಅಧಿಕಾರವಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಯಾರ್ಯಾರಿಗೆ ಯಾವ್ಯಾವ ಕಾಯಿಲೆ ಇದಿಯೋ..? ಅದಕ್ಕೆ ಏನು ಔಷಧಿಗಳು ಬರುತ್ತವೆಯೋ ನೋಡೋಣ ಎಂದು ವ್ಯಂಗ್ಯವಾಡಿದ್ದಾರೆ.
ಒಬ್ಬೊಬ್ಬೊಬ್ಬರಿಗೆ ಒಂದೊಂದು ರೀತಿಯ ಕಾಯಿಲೆ. ಖಾತೆ ಹಂಚಿಕೆ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಾರೆ. ನೋಡೋಣ ಹೈಕಮಾಂಡ್ ನಾಯಕರು ಯಾವ ರೀತಿ ಔಷಧಿಗಳನ್ನು ಕೊಡುತ್ತಾರೆ ಎಂದು ನೋಡೋಣ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ನನಗೇನೂ ಬೇಡ ಎಂದ ರಾಜಣ್ಣ:
ಇದೇ ವೇಳೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ ಮತ್ತು ಆ ರೇಸ್ನಲ್ಲೂ ಇಲ್ಲ ಎಂದು ಕೆ.ಎನ್ ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಸಮುದಾಯವಾರು ಉಪಮುಖ್ಯಮಂತ್ರಿ ಸ್ಥಾನಗಳನ್ನು ನೀಡುವ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಇದು ಬಹಳ ಹಿಂದಿನಿಂದಲೂ ಇರುವ ವಾದ ಎಂದರು. ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಡಿಸಿಎಂ ಸ್ಥಾನಗಳನ್ನು ನೀಡಬೇಕೆಂಬ ವಾದಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವಲ್ಲಿನ ವಿಳಂಬದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಆಗಸ್ಟ್ ಅಂತ್ಯದೊಳಗೆ ಮುಗಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಐದು ವರ್ಷಗಳಿಂದ ನಡೆದಿರುವುದಿಲ್ಲ. ಈ ಚುನಾವಣೆಗಳ ವಿಳಂಬದಿಂದಾಗಿ ಕೇಂದ್ರ ಸರ್ಕಾರವು 73ನೇ ಮತ್ತು 74ನೇ ತಿದ್ದುಪಡಿ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಅನುದಾನವನ್ನು ನಿಲ್ಲಿಸಿದೆ, ಇದು ರಾಜ್ಯಕ್ಕೆ ಅನ್ಯಾಯ ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರು ಆಡಳಿತ ನಡೆಸಬೇಕೇ ಹೊರತು ಅಧಿಕಾರಿಗಳಲ್ಲ ಎಂದು ಹೇಳಿದರು.

