ಶಿವಮೊಗ್ಗ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೊಳಪಡುವ ಪ್ರತಿ ಶಾಸಕರಿಗೆ ತಲಾ ರೂ. 2 ಕೋಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಮುಖ್ಯಮಂತ್ರಿಗಳನ್ನು ಕೋರಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲು ಸರ್ವ ಸದಸ್ಯರ ನಿಯೋಗ ತೆರಳಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಇಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಮಂಡಳಿ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಲೆನಾಡು ಪ್ರದೇಶದಲ್ಲಿ ಕೈಗೊಳ್ಳಬಹುದಾಧ ಅಭಿವೃಧ್ಧಿ ಕಾಮಗಾರಿಗಳ ಕುರಿತು ಹಲವು ನಿರ್ಣಯ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪ್ರಸ್ತುತ ಶಾಸಕರಿಗೆ ತಲಾ ರೂ.37 ಲಕ್ಷ ರೂ.ಗಳ ಅನುದಾನವನ್ನು ನೀಡಲಾಗುತ್ತಿದ್ದು, ಕೈಗೊಳ್ಳಬಹುದಾದ ಕಾಮಗಾರಿಗಳ ಬೇಡಿಕೆ ಪಟ್ಟಿ ಹೆಚ್ಚಾಗಿದೆ. ಆದ್ದರಿಂದ ಪ್ರತಿ ಶಾಸಕರಿಗೆ 2ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಅಲ್ಲದೇ ಮಂಡಳಿಗೆ 300ಕೋಟಿ ರೂ.ಗಳನ್ನು ನಬಾರ್ಡ್‌ನಿಂದ ಪಡೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರವನ್ನು ಕೋರಲು ಸಹ ನಿರ್ಣಯ ಕೈಗೊಳ್ಳಲಾಯಿತು. ಶಾಸಕ ಸದಸ್ಯರು ಬದಲಾವಣೆ ಮಾಡುವ ಅಧಿಕಾರವನ್ನು ಮಂಡಳಿಗೆ ಕೊಟ್ಟಿರುವುದರಿಂದ ಶಾಸಕರು ಪ್ರಸ್ತಾಪಿಸುವ ಬದಲಾವಣೆ ಕಾಮಗಾರಿಗಳನ್ನು ಒಂದು ಬಾರಿ ಬದಲಾವಣೆ ಮಾಡಿ, ಘಟನೋತ್ತರ ಅನುಮೋದನೆಗಾಗಿ ಸಲ್ಲಿಸಿದ ಪ್ರಸ್ತಾವನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಕಳೆದ ಎರಡು ಸಾಲಿನಲ್ಲಿನ ಮಂಡಳಿ ಕಾರ್ಯಕ್ರಮಗಳ ಪ್ರಗತಿ ಮತ್ತು ವೆಚ್ಚದ ವಿವರಗಳಿಗೆ ಹಾಗೂ ಪ್ರಸಕ್ತ ಸಾಲಿನ ಹೊಸ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಪ್ರಸ್ತುತ ಸರ್ಕಾರದ ವಿವೇಚನಾ ನಿಧಿ ಶೇ.10% ಅಧ್ಯಕ್ಷರ ವಿವೇಚನಾ ನಿಧಿ ಶೇ.5% ಮತ್ತು ಉಳಿದ ಅನುದಾನವನ್ನು ಮಂಡಳಿ ವ್ಯಾಪ್ತಿಯ ಶಾಸಕರಿಗೆ ನಿಗದಿಪಡಿಸಿಕೊಂಡು ಹಂಚಿಕೆ ಮಾಡುವಲ್ಲಿ ಇರುವ ನಿಬಂಧನೆಯಲ್ಲಿ ಸರ್ಕಾರಕ್ಕೆ 05% ಮತ್ತು ಅಧ್ಯಕ್ಷರ ವಿವೇಚನೆ ಶೇ10%ರಷ್ಟನ್ನು ಕಾಯ್ದಿರಿಸಲು ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಶಾಸಕರು ಕಾಲುಸಂಕ, ಕಾಲುಸೇತುವೆ, ತೂಗುಸೇತುವೆ, ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಅಲ್ಲಿನ ಶೌಚಾಲಯ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳು, ಆಟೋ ಮತ್ತು ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಅನುಮತಿ ನೀಡುವಂತೆಯೂ ಹಾಗೂ ಅವುಗಳ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳಿಗೂ ಅನುಮೋದನೆ ನೀಡುವಂತೆ ಸಭೆಯ ಗಮನ ಸೆಳೆದರು.
ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಭೋಜೇಗೌಡರು ಪ್ರಸ್ತಾಪಿಸಿದ ವಿಷಯ ಔಚಿತ್ಯಪೂರ್ಣವಾಗಿದ್ದು, ಸಭೆಯಲ್ಲಿನ ಸರ್ವ ಸದಸ್ಯರು ಸರ್ಕಾರಕ್ಕೆ ಅನುಮೋದನೆ ನೀಡುವಂತೆ ಕೋರಿದರು. ಈ ವಿಷಯದ ಬಗ್ಗೆಯೂ ಸಭೆಯು ಏಕರೀತಿಯ ನಿರ್ಣಯ ಕೈಗೊಂಡಿತು.
ಉಳಿದಂತೆ ಶಾಸಕರ ಪ್ರಸ್ತಾಪಿತ ಹಾಗೂ ಪೂರ್ಣಗೊಳಿಸಿದ ಕಾಮಗಾರಿಗಳಿಗೆ ಸಭೆಯ ಅಧ್ಯಕ್ಷರು ಹಾಗೂ ಸಮಿತಿಯು ಅನುಮೋದನೆ ನೀಡಿತು.
ಸಭೆಯಲ್ಲಿ ಶಾಸಕರಾದ ರಾಜೇಗೌಡ, ಬಸವರಾಜ ನೀಲಪ್ಪನವರ್, ಚಂದ್ರಶೇಖರ್, ಡಿ.ಜಿ.ಶಾಂತನಗೌಡರ್, ಬಿ.ಬಣಕಾರ್, ಸಿ.ಟಿ.ರವಿ, ಅಬ್ದುಲ್ ಜಬ್ಬಾರ್, ಆಡಳಿತಾಧಿಕಾರಿ ಅನುರಾಧ, ಸಹಾಯಕ ಆಡಳಿತಾಧಿಕಾರಿ ಹನುಮಾನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಮಿತಿಯ ಅನೇಕ ಸದಸ್ಯರು, ಅಧಿಕಾರಿಗಳು ಆನ್‌ಲೈನ್‌ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

