ಕೊಡಗು: ಕಾಫಿ ತೋಟ ನೋಡಲು ಹೋಗಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ನಿವೃತ್ತ ಐಜಿಪಿ ಪತ್ನಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ನಡೆದಿದೆ.
ಇಲ್ಲಿನ ಕೊಣ್ಣನಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಕೋಣನಕಟ್ಟೆಯಲ್ಲಿ ಕಾಫಿ ತೋಟ ವೀಕ್ಷಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (60) ಮೃತ ಮಹಿಳೆ.
ಸಂಧ್ಯಾ ಅವರು ಇಂದು ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ಅಲ್ಲಿಯೇ ಕಾಫಿ ತೋಟದ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನ ಮೇಲ್ವಿಚಾರಣೆ ಮಾಡಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಕಾಡಾನೆ ಏಕಾಏಕಿ ಸಂಧ್ಯಾ ಅವರ ಮೇಲೆ ದಾಳಿ ನಡೆಸಿದೆ. ಬಳಿಕ ಅಲ್ಲಿದ್ದ ಇಬ್ಬರು ಕಾರ್ಮಿಕರ ಮೇಲೂ ದಾಳಿ ಮಾಡಲು ಮುಂದಾಗಿದೆ. ಇವರು ಓಡಿ ಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪಲು ಲೋಪಾಮುದ್ರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಂಧ್ಯಾ ಮೃತಪಟ್ಟಿದ್ದಾರೆ.
ಗಾಯಾಳು ಕಾರ್ಮಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

