ಬೆಂಗಳೂರು : ರಾಜ್ಯದಲ್ಲಿ ವಿವಾಹ ನೋಂದಣಿ ಮಾಡಿಸುವಾಗ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಅಥವಾ ಎಪಿಕ್ ಕಾರ್ಡ್‌ಗಳನ್ನು ದಾಖಲೆಯಾಗಿ ಪರಿಗಣಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
2021ರಲ್ಲಿ ಹೊರಡಿಸಲಾದ ಸುತ್ತೋಲೆಯ ಪ್ರಕಾರ, ವಿವಾಹ ನೋಂದಣಿಗೆ ಪ್ರಮುಖವಾಗಿ ಜನನ ಪ್ರಮಾಣಪತ್ರ ಅಥವಾ ಶಾಲಾ ದೃಢೀಕರಣ ಪತ್ರವನ್ನು ಮಾತ್ರ ಸಲ್ಲಿಸಬೇಕು. ಒಂದು ವೇಳೆ ಈ ದಾಖಲೆಗಳು ಇಲ್ಲದಿದ್ದರೆ ಮಾತ್ರ ವೈದ್ಯಕೀಯ ಪ್ರಮಾಣಪತ್ರವನ್ನು ಮಾನ್ಯ ಮಾಡಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ. ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ.
2021ರಲ್ಲಿ ಹೊರಡಿಸಲಾದ ಸುತ್ತೋಲೆಯ ಪ್ರಮುಖ ಅಂಶಗಳು
ವಿವಾಹ ನೋಂದಣಾಧಿಕಾರಿಗಳು ‘Registration of Hindu Marriage (Karnataka) Rules 1966’ರ ನಿಯಮ 4ರ ಅನ್ವಯ ವಯಸ್ಸಿನ ದಾಖಲೆಗಳನ್ನು ಪಡೆಯುವ ಬಗ್ಗೆ ಈ ಹಿಂದೆ ಮಾರ್ಗಸೂಚಿಗಳನ್ನು ನೀಡಲಾಗಿತ್ತು.ಜನವರಿ 22, 2020ರಂದು ನಡೆದ ಬಾಲ್ಯ ವಿವಾಹ ತಡೆಗಟ್ಟುವ ರಾಜ್ಯ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿಯ ಸಭೆಯಲ್ಲಿ ಈ ಕೆಳಗಿನ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ವಿವಾಹ ನೋಂದಣಿ ಸಮಯದಲ್ಲಿ ವಯಸ್ಸಿನ ದಾಖಲೆಗಾಗಿ ಜನನ ಪ್ರಮಾಣಪತ್ರ ಅಥವಾ ಶಾಲಾ ದೃಢೀಕರಣ ಪತ್ರ ಕಡ್ಡಾಯ.ಈ ಮೇಲಿನ ಎರಡೂ ದಾಖಲೆಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಮಾತ್ರ ವೈದ್ಯಕೀಯ ಪ್ರಮಾಣಪತ್ರವನ್ನು ಪರಿಗಣಿಸಬಹುದು. ಆಧಾರ್ ಕಾರ್ಡ್ ಅಥವಾ ಎಪಿಕ್ ಕಾರ್ಡ್ (Epic Card) ಅನ್ನು ವಯಸ್ಸಿನ ದಾಖಲೆಯಾಗಿ ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಸೂಚನೆ : ಎಲ್ಲಾ ನೋಂದಣಾಧಿಕಾರಿಗಳಿಗೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.


