ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ಅನರ್ಹರು ಕೂಡ ಪಡೆದುಕೊಳ್ಳುತ್ತಿದ್ದಾರೆ. ಅರ್ಹರಿಗೆ ಮಾತ್ರ ಪ್ರಯೋಜನ ಸಿಗಬೇಕಿದ್ದು, ಈ ನಿಟ್ಟಿನಲ್ಲಿ ಅರ್ಹರು, ಅನರ್ಹರ ನಿಖರ ಮಾಹಿತಿ ಕಲೆ ಹಾಕಲು ಸರ್ಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಸುಳಿವು ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಹಿರಿಯ ಅಧಿಕಾರಿಗಳ ಜೊತೆಗೆ ಮೊದಲ ಸಭೆ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್, ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ದುರ್ಬಳಕೆಗೆ ಆಗುತ್ತಿವೆ. ಫಲಾನುಭವಿಗಳ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಪರಿಷ್ಕರಿಸುವುದಿಲ್ಲ. ಕೇವಲ ಫಲಾನುಭವಿಗಳ ಮಾಹಿತಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಗ್ಯಾರಂಟಿ ಯೋಜನೆ ಫಲಾನುಭವಿಗಳ ಮೊಬೈಲ್ ಸಂಖ್ಯೆ ಮತ್ತು ವಿವರದಲ್ಲಿ ವ್ಯತ್ಯಾಸವಿದೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. 1.64 ಕೋಟಿ ಫಲಾನುಭವಿಗಳಿದ್ದು, ಅರ್ಹರಿಗೆ ಉಚಿತ ವಿದ್ಯುತ್ ನೀಡಲಾಗುವುದು. ಯಾರೆಲ್ಲ ಯೋಜನೆ ಲಾಭ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ನಮ್ಮ ಬಳಿ ಇರಬೇಕಲ್ಲವೇ? ಒಬ್ಬರ ಹೆಸರಿನಲ್ಲೇ ಐದಾರು ಮೀಟರ್ ಗಳಿವೆ. ಇವರಲ್ಲಿ ನಮ್ಮ ರಾಜ್ಯದವರು ಇದ್ದಾರೆಯೇ ಇಲ್ಲವೋ ಎನ್ನುವ ಮಾಹಿತಿ ಕೂಡ ಸಿಗಲಿದೆ. ಈ ಕಾರಣಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಲ್ಲಿ ಕೆಲವರು ಮೃತಪಟ್ಟಿದ್ದಾರೆ. ಮೃತರ ಹೆಸರಿನಲ್ಲಿಯೂ ಯೋಜನೆ ಹಣ ಪಡೆಯಲಾಗುತ್ತಿದೆ. ಹಣ ದುರುಪಯೋಗವಾಗಬಾರದು ಎನ್ನುವ ಕಾರಣಕ್ಕೆ ದೂರವಾಣಿ ಸಂಖ್ಯೆ ಸಹಿತ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

