ಕಿರುತೆರೆ ನಟಿ ಶಿಲ್ಪಾ ಶಿಂಧೆ ಅವರು ಈ ಹಿಂದೆ ‘ಭಾಭಿ ಜೀ ಘರ್ ಪರ್ ಹೈ’ ಧಾರಾವಾಹಿಯ ನಿರ್ಮಾಪಕರ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ಸುಳ್ಳು ಎಂದು ಒಪ್ಪಿಕೊಂಡಿರುವುದು ಈಗ ಟಿವಿ ಉದ್ಯಮದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಈ ನಡುವೆ, ಮತ್ತೊಬ್ಬ ಪ್ರಸಿದ್ಧ ನಟಿ ಹಿನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪರೋಕ್ಷ ಪೋಸ್ಟ್ (ಕ್ರಿಪ್ಟಿಕ್ ನೋಟ್) ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇದು ಶಿಲ್ಪಾ ಶಿಂಧೆ ಅವರಿಗೆ ನೀಡಿದ ತಿರುಗೇಟು ಎಂದೇ ಹೇಳಲಾಗುತ್ತಿದೆ.
ಹಿನಾ ಖಾನ್ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ದೇಶದ ಉನ್ನತ ಹುದ್ದೆಗಳಾದ ಪ್ರಧಾನ ಮಂತ್ರಿ, ರಾಷ್ಟ್ರಪತಿ ಹಾಗೂ ಕಾನೂನು ಸಚಿವರಿಗೆ ಟ್ಯಾಗ್ ಮಾಡಿ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ, “ಗೌರವಾನ್ವಿತ ಭಾರತದ ಪ್ರಧಾನ ಮಂತ್ರಿಗಳೇ, ರಾಷ್ಟ್ರಪತಿಗಳೇ ಹಾಗೂ ಕಾನೂನು ಸಚಿವರೇ, ಅಪರಾಧ ಮಾಡಿದ ನಂತರ ಅದನ್ನು ಒಪ್ಪಿಕೊಳ್ಳುವ ಧೈರ್ಯ ತೋರಿಸಿದ ಎಲ್ಲಾ ಅಪರಾಧಿಗಳನ್ನು ದಯವಿಟ್ಟು ಜೈಲಿನಿಂದ ಬಿಡುಗಡೆ ಮಾಡಿ. ಏಕೆಂದರೆ ಅವರು ಹೋರಾಟಗಾರರು, ಸತ್ಯದ ಪರ ನಿಲ್ಲುವವರು ಮತ್ತು ಅವರು ಅಪರಾಧ ಮಾಡುವಾಗ ಅವರಿಗೆ ಯಾರೂ ಬೆಂಬಲ ನೀಡಿರಲಿಲ್ಲ” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.
ವಿವಾದದ ಹಿನ್ನೆಲೆ ಏನು? ಇತ್ತೀಚೆಗೆ ಭಾರ್ತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಶಿಲ್ಪಾ ಶಿಂಧೆ, ತಾವು ಈ ಹಿಂದೆ ನಿರ್ಮಾಪಕರ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ಸುಳ್ಳಾಗಿತ್ತು ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದರು. ಈ ಹೇಳಿಕೆ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸುಳ್ಳು ಆರೋಪ ಮಾಡುವ ಮೂಲಕ ನಿಜವಾದ ಸಂತ್ರಸ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹಿನಾ ಖಾನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಶಿಲ್ಪಾ ನಡೆಯನ್ನು ಖಂಡಿಸಿದ್ದರು.
ತಿರುಗೇಟು ನೀಡಿದ್ದ ಶಿಲ್ಪಾ ಶಿಂಧೆ ತಮ್ಮ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ಶಿಲ್ಪಾ ಶಿಂಧೆ, “ನಾನು ನನ್ನ ಸತ್ಯವನ್ನು ಒಪ್ಪಿಕೊಂಡಿದ್ದೇನೆ. ನಾನು ಯಾವ ಪರಿಸ್ಥಿತಿಯಲ್ಲಿ ಆ ರೀತಿ ಮಾಡಬೇಕಾಯಿತು ಎಂಬುದನ್ನು ತಿಳಿಯದೆ ನನ್ನನ್ನು ಯಾರೂ ನಿರ್ಣಯಿಸಬೇಡಿ. ನನ್ನ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ ನನಗಿದೆ” ಎಂದು ಸಮರ್ಥಿಸಿಕೊಂಡಿದ್ದರು. ಅಲ್ಲದೆ, ಈ ವಿಡಿಯೋದಲ್ಲಿ ಅವರು ಹಿನಾ ಖಾನ್ ಹಾಗೂ ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ ಅವರ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಟೀಕಿಸಿದ್ದರು ಎನ್ನಲಾಗಿದೆ.
ಇದಕ್ಕೆ ಕೌಂಟರ್ ಎಂಬಂತೆ ಹಿನಾ ಖಾನ್ ಈಗ ಪ್ರಧಾನಿ ಹಾಗೂ ರಾಷ್ಟ್ರಪತಿಯವರನ್ನು ಎಳೆದು ತಂದು ಮಾಡಿರುವ ಪೋಸ್ಟ್ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇಬ್ಬರೂ ನಟಿಯರು ಪರಸ್ಪರ ನೇರವಾಗಿ ಹೆಸರು ಪ್ರಸ್ತಾಪಿಸದಿದ್ದರೂ, ಇವರ ನಡುವಿನ ಈ ಪರೋಕ್ಷ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ.

