ವಯಸ್ಸು ಮೀರುತ್ತಿದ್ದರೂ ಸೂಕ್ತ ಕಂಕಣ ಬಲ ಕೂಡಿಬರದೆ ಮದುವೆ ವಿಳಂಬವಾಗುತ್ತಿರುವುದು ಇಂದಿನ ದಿನಗಳಲ್ಲಿ ಅನೇಕ ಯುವಕ ಯುವತಿಯರು ಹಾಗೂ ಅವರ ಪೋಷಕರ ಪ್ರಮುಖ ಚಿಂತೆಯಾಗಿದೆ. ಜಾತಕದಲ್ಲಿನ ಗ್ರಹಗತಿಗಳ ಏರುಪೇರು, ಕುಜ ದೋಷ ಅಥವಾ ಇನ್ಯಾವುದೇ ದೋಷಗಳು ವಿವಾಹ ತಡವಾಗಲು ಪ್ರಮುಖ ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಧೃತಿಗೆಡದೆ, ಶಾಸ್ತ್ರೋಕ್ತವಾಗಿ ಕೆಲವು ನಿಯಮಗಳನ್ನು ಮತ್ತು ಸರಳ ಪರಿಹಾರಗಳನ್ನು ಪಾಲಿಸುವುದರಿಂದ ಕಂಕಣ ಭಾಗ್ಯ ಬೇಗನೆ ಒಲಿಯುತ್ತದೆ ಎನ್ನಲಾಗುತ್ತದೆ. ಆ ದೋಷ ನಿವಾರಣೆಯ ದಾರಿಗಳು ಇಲ್ಲಿವೆ.
ಗುರುವಾರದ ವಿಶೇಷ ಪೂಜೆ ಮತ್ತು ವ್ರತ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವನ್ನು ವಿವಾಹ ಕಾರಕ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಗುರು ಬಲ ದುರ್ಬಲವಾಗಿದ್ದರೆ ಮದುವೆಗೆ ಅಡೆತಡೆಗಳು ಎದುರಾಗುತ್ತವೆ. ಹಾಗಾಗಿ ಪ್ರತಿದಿನ ಅಥವಾ ವಿಶೇಷವಾಗಿ ಗುರುವಾರದಂದು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಆರಾಧಿಸುವುದು ಸೂಕ್ತ. ಗುರುವಾರ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ, ಹಳದಿ ಹೂವುಗಳು ಹಾಗೂ ಕಡಲೆಬೇಳೆಯನ್ನು ದಾನ ಮಾಡುವುದರಿಂದ ಗುರು ಬಲ ಹೆಚ್ಚುತ್ತದೆ.
ಕುಜ ದೋಷ ನಿವಾರಣೆಗೆ ಮಂಗಳವಾರದ ನಿಯಮ ಅನೇಕ ಬಾರಿ ಜಾತಕದಲ್ಲಿನ ಮಂಗಳ ಅಥವಾ ಕುಜ ದೋಷದಿಂದಾಗಿ ಮದುವೆ ಮಾತುಕತೆಗಳು ಕೊನೆ ಹಂತದಲ್ಲಿ ಮುರಿದು ಬೀಳುತ್ತವೆ. ಈ ದೋಷ ನಿವಾರಣೆಗೆ ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿ ಅಥವಾ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು. ಮಂಗಳವಾರ ಕೆಂಪು ಬಣ್ಣದ ಬೇಳೆಯನ್ನು ದಾನ ಮಾಡುವುದು ಮತ್ತು ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸುವುದರಿಂದ ಮದುವೆಗೆ ಎದುರಾಗುವ ವಿಘ್ನಗಳು ನಿವಾರಣೆಯಾಗುತ್ತವೆ.
ಶಿವ ಪಾರ್ವತಿ ಕಲ್ಯಾಣ ಪೂಜೆ ಆದರ್ಶ ದಾಂಪತ್ಯಕ್ಕೆ ಶಿವ ಮತ್ತು ಪಾರ್ವತಿಯನ್ನು ಮಾದರಿಯಾಗಿ ನೋಡಲಾಗುತ್ತದೆ. ಶೀಘ್ರ ವಿವಾಹದ ಕನಸು ಹೊತ್ತ ಯುವಕ ಯುವತಿಯರು ಸೋಮವಾರದ ವ್ರತ ಕೈಗೊಳ್ಳುವುದು ಬಹಳ ಉತ್ತಮ. ಸೋಮವಾರ ಶಿವಲಿಂಗಕ್ಕೆ ಜಲಾಭಿಷೇಕ ಅಥವಾ ಹಾಲಿನ ಅಭಿಷೇಕ ಮಾಡಿ, ಮಾತಾ ಪಾರ್ವತಿಗೆ ಅರ್ಚನೆ ಮಾಡುವುದರಿಂದ ವಿವಾಹ ಯೋಗ ತಕ್ಷಣವೇ ಕೂಡಿಬರುತ್ತದೆ ಎಂಬ ನಂಬಿಕೆ ಇದೆ.
ವಾಸ್ತು ದೋಷಗಳ ಕಡೆ ಇರಲಿ ಗಮನ ಮನೆಯ ವಾಸ್ತು ದೋಷ ಕೂಡ ಮದುವೆ ವಿಳಂಬಕ್ಕೆ ಕಾರಣವಾಗಿರಬಹುದು. ಮದುವೆಯ ವಯಸ್ಸಿಗೆ ಬಂದ ಯುವಕ ಯುವತಿಯರು ಮಲಗುವ ಕೋಣೆ ಮನೆಯ ವಾಯುವ್ಯ ಅಂದರೆ ವಾಯು ಮೂಲೆ ಅಥವಾ ಉತ್ತರ ದಿಕ್ಕಿನಲ್ಲಿ ಇರುವುದು ಪ್ರಶಸ್ತ ಎನ್ನಲಾಗುತ್ತದೆ. ಕೋಣೆಯಲ್ಲಿ ಗಾಢ ಬಣ್ಣಗಳ ಬದಲಿಗೆ ತಿಳಿ ಬಣ್ಣಗಳ ಬಳಕೆಯು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಮದುವೆಯ ಪ್ರಸ್ತಾಪಗಳು ವೇಗವಾಗಿ ಬರುವಂತೆ ಮಾಡುತ್ತದೆ.
ಯಾವುದೇ ಪರಿಹಾರಗಳನ್ನು ಮಾಡುವಾಗ ಸಂಪೂರ್ಣ ನಂಬಿಕೆ ಮತ್ತು ಶ್ರದ್ಧೆ ಇರಬೇಕಾದುದು ಅತ್ಯಗತ್ಯ. ನಿರಂತರ ಪ್ರಯತ್ನದ ಜೊತೆಗೆ ಈ ಧಾರ್ಮಿಕ ನಿಯಮಗಳನ್ನು ಪಾಲಿಸಿದರೆ ಕಂಕಣ ಬಲ ಬೇಗನೆ ಒದಗಿಬರುತ್ತದೆ.

