ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೇಗರವಳ್ಳಿಯಲ್ಲಿ ಬೆಕ್ಕುಗಳ ನಡುವಿನ ಜಗಳವು ಎರಡು ಕುಟುಂಬಗಳ ನಡುವಿನ ದೊಡ್ಡ ಹೊಡೆದಾಟಕ್ಕೆ ತಿರುಗಿದ್ದು, ಕೊನೆಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಘಟನೆಯ ಹಿನ್ನೆಲೆ:
ನಾಗಪಾತ್ರಿ ರಾಜಶೇಖರ್ ಅವರಿಗೆ ಸೇರಿದ ವಿದೇಶಿ ತಳಿಯ ಬೆಕ್ಕಿಗೆ, ನೆರೆಮನೆಯ ನಾಗರಾಜ ಅವರ ಬೆಕ್ಕು ಕಚ್ಚಿದೆ ಎಂಬ ವಿಚಾರವೇ ಈ ಎಲ್ಲ ಗಲಾಟೆಗೆ ಮೂಲ ಕಾರಣ. ಆರಂಭದಲ್ಲಿ ಬೆಕ್ಕುಗಳ ನಡುವೆ ನಡೆದ ಜಗಳ, ನಂತರ ಮಾಲೀಕರ ನಡುವಿನ ಮಾತಿನ ಚಕಮಕಿಯಾಗಿ ಬದಲಾಗಿ, ಬಳಿಕ ಪರಸ್ಪರ ಹೊಡೆದಾಟದಲ್ಲಿ ಅಂತ್ಯಗೊಂಡಿದೆ.
- ಈ ಘಟನೆಯಲ್ಲಿ ನಾಗಪಾತ್ರಿ ರಾಜಶೇಖರ್ ಮತ್ತು ನೆರೆಮನೆಯ ಮೇಘನಾ ಎಂಬುವವರು ಗಾಯಗೊಂಡಿದ್ದು, ಅವರನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಒಟ್ಟು 20 ಮಂದಿಯ ವಿರುದ್ಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ನಾಗಪಾತ್ರಿ ರಾಜಶೇಖರ್ ಅವರು 16 ಜನರ ವಿರುದ್ಧ ದೂರು ನೀಡಿದ್ದಾರೆ.ಪ್ರತಿಯಾಗಿ ನಾಗರಾಜ ಅವರು 4 ಮಂದಿಯ ವಿರುದ್ಧ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಗರಾಜ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

