ಇಂದು ( ಜೂನ್ 3 ) ರಾಜ್ಯ ರಾಜಕಾರಣದಲ್ಲಿ ಮಹತ್ವದ ದಿನವಾಗಿದ್ದು, ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಮೂರು ವರ್ಷಗಳ ಕಾಲ ಸಿಎಂ ಆಗಿ ಅಧಿಕಾರ ನಡೆಸಿದ ಬಳಿಕ ಅಧಿಕಾರ ಹಂಚಿಕೆ ನಡೆದಿದ್ದು, ಇದೀಗ ಉಳಿದ ಎರಡು ವರ್ಷಗಳ ಅವಧಿಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಬಳಿಕ ನಡೆದ ಶಾಸಕಾಂಗ ಸಭೆಯಲ್ಲಿ ನಿರೀಕ್ಷೆಯಂತೆ ಡಿಕೆಶಿ ನಾಯಕ ಎಂದು ಘೋಷಣೆಯಾಗಿ ಹೈಕಮಾಂಡ್‌ನಲ್ಲಿ ಮಂತ್ರಿಮಂಡಲದ ಬಗ್ಗೆ ಚರ್ಚೆಗಳು ನಡೆದ ಬಳಿಕ ಇಂದು ಲೋಕಭವನದಲ್ಲಿ ಸರಳವಾಗಿ ಡಿಕೆಶಿ ಪಟ್ಟಾಭಿಷೇಕ ನಡೆಯುತ್ತಿದ್ದು, ಡಿಕೆಗೆ ವಿವಿಧ ಕ್ಷೇತ್ರಗಳ ಗಣ್ಯರು ಶುಭಾಶಯ ಕೋರಿದ್ದಾರೆ.
ಅದರಂತೆ ತುಮಕೂರಿನ ಸಿದ್ದಲಿಂಗ ಸ್ವಾಮೀಜಿಗಳೂ ಸಹ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷ ನಿಷ್ಠೆಯಿಂದ ಹೋರಾಡಿ, ಪಕ್ಷಕ್ಕೆ ಕಷ್ಟವಿದ್ದಾಗ ಬಂಡೆಯಂತೆ ನಿಂತು ಕೆಲಸ ಮಾಡಿದ ಡಿಕೆಶಿ ಅವರ ನಿಷ್ಠೆಗೆ ಸಂದ ಬೆಲೆ ಇದು ಎಂದ ಸಿದ್ದಲಿಂಗ ಸ್ವಾಮೀಜಿಗಳು ಡಿಕೆಶಿ ಕನಕಪುರದ ಗ್ರಾಮಾಂತರ ಪ್ರದೇಶದಿಂದ ಬಂದು ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಆರಂಭಿಸಿದ ಡಿಕೆಶಿ ಬೆಳೆದು ಬಂದ ಹಾದಿಯನ್ನು ಹೊಗಳಿದರು.
ಚಿಕ್ಕ ವಯಸ್ಸಲ್ಲೇ ಶಾಸಕ ಹಾಗೂ ಮಂತ್ರಿಯಾಗಿ 40 ವರ್ಷಗಳ ಕಾಲ ಸುದೀರ್ಘವಾಗಿ ರಾಜಕೀಯ ಜೀವನ ನಡೆಸಿದ ಡಿಕೆಶಿ ಮುಖ್ಯಮಂತ್ರಿಯಾಗಬೇಕೆಂಬ ಕೂಗು ಒಂದು ವರ್ಷದಿಂದ ಇತ್ತು, ಇದನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ನಿರ್ಧಾರವನ್ನು ತೆಗೆದುಕೊಂಡಿದ್ದು, ಡಿಕೆಶಿ ಮುಖ್ಯಮಂತ್ರಿಯಾಗುತ್ತಿರುವುದು ಎಲ್ಲರಿಗೂ ಸಂತಸ ಹಾಗೂ ಸ್ವಾಗತಾರ್ಹ ಎಂದು ಸಿದ್ದಲಿಂಗ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ.
ಇನ್ನು ಡಿಕೆಶಿ ಅವರು ಸಹನೆಯಿಂದ ಇದ್ದವರು, ಯಾವತ್ತಿಗೂ ಬಲವಂತದಿಂದ ಅಧಿಕಾರ ಬೇಕು ಎಂದವರಲ್ಲ, ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆ ವಿಫಲವಾಗುವುದಿಲ್ಲ ಎನ್ನುತ್ತಿದ್ದವರು ಎಂದು ಹಳೆಯ ಹೇಳಿಕೆ ನೆನೆದ ಸಿದ್ದಲಿಂಗ ಸ್ವಾಮೀಜಿಗಳು ಡಿಕೆಶಿ ದೇವರು, ಧರ್ಮಗುರುಗಳು ಹಾಗೂ ದೈವದ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿ, ಜನರು ಎರಡು ವರ್ಷಗಳ ಕಾಲ ಅವರಿಗೆ ಮುಖ್ಯಮಂತ್ರಿಯಾಗಿರಲು ಆಶೀರ್ವದಿಸಿದರೆ, ಮುಂದಿನ ಅವಧಿಗೂ ಸಹ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಹಕಾರಿಯಾಗಲಿದೆ ಎಂದರು.

