ಹಾಸನದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬನ ಕೊಲೆ ರಹಸ್ಯ ಸಿಸಿಟಿವಿ ಮೂಲಕ ಬಯಲಾಗಿದೆ. ಪತ್ನಿ ಹಾಗೂ ಅಪ್ರಾಪ್ತ ಪುತ್ರನೇ ಆತನ ಮೇಲೆ ಹಲ್ಲೆ ಮಾಡಿ ಕೊಲೆಗೈದ ಆರೋಪ ಕೇಳಿ ಬಂದಿದೆ.
ಮೇ 18ರಂದು ಹಾಸನ ನಗರದ ತಣ್ಣೀರುಹಳ್ಳದ ನಿವಾಸಿ ಗುರುಮೂರ್ತಿ ಮನೆಯಲ್ಲಿ ಮಂಚದ ಮೇಲೆ ಮಲಗಿದ್ದ ವೇಳೆಯೇ ಮೃತಪಟ್ಟಿದ್ದರು. ತರಾತುರಿಯಲ್ಲಿ ಆತನ ಅಂತ್ಯಕ್ರಿಯೆ ನಡೆಸಲಾಗಿತ್ತು. ವಿಮೆ ಹಣಕ್ಕಾಗಿ ಪತ್ನಿ ಹಾಗೂ ಅಪ್ರಾಪ್ತ ಪುತ್ರ ಹಲ್ಲೆ ನಡೆಸಿ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದ ಆರೋಪ ಕೇಳಿ ಬಂದಿದೆ.
ನಂತರದಲ್ಲಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಗುರುಮೂರ್ತಿಯ ಪತ್ನಿ ವೀಣಾ ಮತ್ತು ಅಪ್ರಾಪ್ತ ಪುತ್ರ ಹಲ್ಲೆ ನಡೆಸುವ ದೃಶ್ಯ ಸೆರೆಯಾಗಿದೆ. ಪತ್ನಿ, ಪುತ್ರನಿಂದ ಹಲ್ಲೆಗೊಳಗಾದ ಗುರುಮೂರ್ತಿ ಸಾವನ್ನಪ್ಪಿರುವುದಾಗಿ ತಾಯಿ ರೇಣುಕಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಅನ್ವಯ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮೈಸೂರು ಮೂಲದ ಗುರುಮೂರ್ತಿ ಹಾಸನದ ವೀಣಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಗುರುಮೂರ್ತಿ ತಣ್ಣೀರುಹಳ್ಳದಲ್ಲಿ ಮಿಲ್ಟ್ರಿ ಹೋಟೆಲ್ ನಡೆಸುತ್ತಿದ್ದು, ಹೊಸ ಮನೆ ನಿರ್ಮಿಸುತ್ತಿದ್ದರು. ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದರು. ನಿಮ್ಮ ತಾಯಿಯ ಜಮೀನು ಮಾರಾಟ ಮಾಡಿ ಹಣ ತರುವಂತೆ ಪತ್ನಿ ವೀಣಾ ಗುರುಮೂರ್ತಿ ಜೊತೆಗೆ ಪದೇ ಪದೇ ಜಗಳವಾಡುತ್ತಿದ್ದರು. ಇದನ್ನು ತಾಯಿ ರೇಣುಕಮ್ಮ ಬಳಿ ಹೇಳಿದಾಗ ಅವರು ಜಮೀನು ಮಾರಾಟ ಮಾಡಿ 25 ಲಕ್ಷ ರೂ.ಗಳನ್ನು ಗುರುಮೂರ್ತಿಗೆ ನೀಡಿದ್ದರು.
ಹೀಗಿದ್ದರೂ ವೀಣಾ ಬದಲಾಗಿರಲಿಲ್ಲ. ಇನ್ನೂ ಹೆಚ್ಚು ಹಣ ತರುವಂತೆ ಪೀಡಿಸುತ್ತಿದ್ದರು. ಮೇ 14ರಂದು ಮೈಸೂರಿನ ತಾಯಿ ಮನೆಗೆ ಹೋಗಿದ್ದ ಗುರುಮೂರ್ತಿ ಹೊಟ್ಟೆಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದನ್ನು ನೋಡಿದ ತಾಯಿ ರೇಣುಕಮ್ಮ ವಿಚಾರಿಸಿದಾಗ ಪತ್ನಿ ಮತ್ತು ಪುತ್ರ ಹಲ್ಲೆ ಮಾಡಿರುವುದಾಗಿ ತಾಯಿಯ ಬಳಿ ಗುರುಮೂರ್ತಿ ಹೇಳಿಕೊಂಡಿದ್ದರು.
ಮೇ 15 ರಂದು ಗುರುಮೂರ್ತಿ ಹಾಸನಕ್ಕೆ ವಾಪಸ್ ಬಂದು ಮೇ 18ರಂದು ಮಲಗಿದ್ದ ಜಾಗದಲ್ಲೇ ಮೃತಪಟ್ಟಿದ್ದರು. ನಂತರ, ಪತ್ನಿ ವೀಣಾ, ಗುರುಮೂರ್ತಿ ಶವವನ್ನು ಸುಡಬೇಕೆಂದು ಒತ್ತಾಯಿಸಿದ್ದರು. ಆದರೆ ರೇಣುಕಮ್ಮ ಮತ್ತು ಸಂಬಂಧಿಕರು ಶವ ಸುಡಲು ವಿರೋಧಿಸಿ ಬಿಟ್ಟಗೌಡನಹಳ್ಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು.
ನಂತರ ಗುರುಮೂರ್ತಿ ಅವರ ಮಾವ ಸಿಸಿಟಿವಿಯ ಡಿವಿಆರ್ ಮೈಸೂರಿಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ ವೇಳೆ ಸಾವಿನ ರಹಸ್ಯ ಗೊತ್ತಾಗಿದೆ. ಮೇ 17ರಂದು ಪತಿಯ ಜೊತೆ ವೀಣಾ ಜಗಳವಾಡಿದ್ದು, ಅಪ್ರಾಪ್ತ ಪುತ್ರನೊಂದಿಗೆ ಸೇರಿ ಗುರುಮೂರ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೀವ್ರ ಹಲ್ಲೆಗೊಳಗಾದ ಗುರುಮೂರ್ತಿ ಮನೆಯಲ್ಲೇ ಕುಸಿದು ಬಿದ್ದಿದ್ದಾರೆ.
ನಂತರ ಅಪ್ರಾಪ್ತ ಪುತ್ರ ತಂದೆಯನ್ನು ಮಂಚದ ಮೇಲೆ ಮಲಗಿಸಿದ್ದು, ಮೇ 18ರಂದು ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಪುತ್ರನಿಂದ ಹಲ್ಲೆಗೊಳಗಾಗಿ ಮಗ ಮೃತಪಟ್ಟಿದ್ದಾನೆ. ವಿಮೆ ಹಣಕ್ಕಾಗಿ ಮೃತದೇಹವನ್ನು ಸುಡಲು ತಯಾರಿ ನಡೆಸಿದ್ದರು ಎಂದು ಗುರುಮೂರ್ತಿ ತಾಯಿ ರೇಣುಕಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ನಂತರ ವೀಣಾ ಮತ್ತು ಆಕೆಯ ಸಹೋದರರು ಕೇಸ್ ವಾಪಸ್ ಪಡೆದುಕೊಳ್ಳಿ. 25 ಲಕ್ಷ ರೂ. ಕೊಡುತ್ತೇವೆ ಎಂದು ಆಮಿಷವೊಡ್ಡಿದ್ದರು ಎನ್ನಲಾಗಿದೆ. ಹಾಸನ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

