ಬೇಗುಸರಾಯ್: ಹಿಂದೂ ಸಂಪ್ರದಾಯದಲ್ಲಿ ತಾಯಿ ನಿಧನರಾದಾಗ ಶ್ರಾದ್ಧ ಅಥವಾ ಉತ್ತರ ಕ್ರಿಯೆಗಳನ್ನು ಅತ್ಯಂತ ಭಕ್ತಿ, ಗೌರವ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಜನೆ, ಕೀರ್ತನೆ ಅಥವಾ ಧಾರ್ಮಿಕ ಪ್ರವಚನಗಳನ್ನು ಹಮ್ಮಿಕೊಳ್ಳುವುದು ವಾಡಿಕೆ. ಆದರೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ತಾಯಿಯ ಶ್ರಾದ್ಧದ ದಿನದಂದೇ ರಾತ್ರಿಯಿಡೀ ಅಶ್ಲೀಲ ನೃತ್ಯ ಕಾರ್ಯಕ್ರಮ ಆಯೋಜಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಬಲ್ಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಶಿವನಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಮೈನಾ ದೇವಿ ಅಲಿಯಾಸ್ ಜಾನಕಿ ದೇವಿ ಎಂಬ ವೃದ್ಧೆ ಮೇ 19 ರಂದು ನಿಧನರಾಗಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಮೇ 30 ರಂದು ದ್ವಾದಶ ಅಂದರೆ 12ನೇ ದಿನದ ಪುಣ್ಯತಿಥಿ ಮತ್ತು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮೃತಳ ಮಗ ಮಹಾರಾಣಾ ಪ್ರತಾಪ್ ಪಾಸ್ವಾನ್ ಎಂಬಾತ, ಧಾರ್ಮಿಕ ಕಾರ್ಯಕ್ರಮಗಳ ಬದಲಿಗೆ ಬಿಹಾರದ ಸಾಂಪ್ರದಾಯಿಕ ಜಾನಪದ ಮನೋರಂಜನಾ ರೂಪವಾದ ಲೌಂಡಾ ನೃತ್ಯಗಾರರನ್ನು ಕರೆಸಿ ಇಡೀ ರಾತ್ರಿ ಡ್ಯಾನ್ಸ್ ಪ್ರೋಗ್ರಾಂ ಏರ್ಪಡಿಸಿದ್ದಾನೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ವೇದಿಕೆಯ ಮೇಲೆ ಮೃತ ವೃದ್ಧೆಯ ಭಾವಚಿತ್ರವಿರುವ ದೊಡ್ಡ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿದೆ. ಆ ಬ್ಯಾನರ್ ಮುಂಭಾಗದಲ್ಲೇ ಧ್ವನಿವರ್ಧಕಗಳ ಮೂಲಕ ಜೋರಾಗಿ ಹಿಂದಿ ಮತ್ತು ಭೋಜಪುರಿ ಹಾಡುಗಳನ್ನು ಹಾಕಲಾಗಿದ್ದು, ನೃತ್ಯಗಾರರು ರಾತ್ರಿಯಿಡೀ ಅಸಭ್ಯವಾಗಿ ನೃತ್ಯ ಮಾಡಿದ್ದಾರೆ. ಆರಂಭದಲ್ಲಿ ಸಾಮಾನ್ಯ ಶ್ರದ್ಧಾಂಜಲಿ ಸಭೆಯಂತೆ ಆರಂಭವಾದ ಈ ಕಾರ್ಯಕ್ರಮ, ಸಮಯ ಕಳೆದಂತೆ ಮದುವೆ ಸಂಭ್ರಮ ಅಥವಾ ರಸಮಂಜರಿ ಕಾರ್ಯಕ್ರಮದಂತೆ ಮಾರ್ಪಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಬಂದಿದ್ದ ಜನರು ಕೂಡ ಈ ನೃತ್ಯವನ್ನು ಸಖತ್ ಆಗಿ ಎಂಜಾಯ್ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಮಗನ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಾಯಿಯ ಶೋಕಾಚರಣೆಯ ಸಂದರ್ಭದಲ್ಲಿ ಇಂತಹ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಧಕ್ಕೆ ತರುವಂತಹದ್ದು ಎಂದು ಹಲವರು ಟೀಕಿಸಿದ್ದಾರೆ. ಈ ಘಟನೆಯು ಸಾಂಪ್ರದಾಯಿಕ ಪದ್ಧತಿಗಳು ಮತ್ತು ವೈಯಕ್ತಿಕ ಆಯ್ಕೆಗಳ ನಡುವಿನ ಚರ್ಚೆಯನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದಿಂದ ಯಾವುದೇ ಅಧಿಕೃತ ಕ್ರಮ ಅಥವಾ ಹೇಳಿಕೆ ಹೊರಬಿದ್ದಿಲ್ಲ.

