ಹುಬ್ಬಳ್ಳಿ: ಶಾಲಾ ಸಮವಸ್ತ್ರದಲ್ಲಿ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಅವಕಾಶ ನೀಡಿದ್ದು, ಇದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಪ್ರಾರಂಭಿಸಿವೆ.
ಇಂದಿನಿಂದ ಹೊಸ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಸರ್ಕಾರದ ಆದೇಶದ ವಿರುದ್ಧ ಸಿಡಿದೆದ್ದಿರುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹುಬ್ಬಳ್ಳಿಯ ವಿವಿಧೆಡೆ ಪ್ರಮುಖ ಕಾಲೇಜುಗಳ ಮುಂಭಾಗದಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ್ದಾರೆ. ಈ ಮೂಲಕ ಸರ್ಕಾರದ ಆದೇಶ ಖಂಡಿಸಿದ್ದಾರೆ. ತಕ್ಷಣವೇ ಹಿಜಾಬ್ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಈ ಅಭಿಯಾನವನ್ನು ವಿಸ್ತರಿಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ಕನಕದಾಸ ಕಾಲೇಜು ಮುಂಭಾಗ ಜಮಾಯಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಕಾಲೇಜಿಗೆ ಆಗಮಿಸುತ್ತಿದ್ದ ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದರು. ಕೆಲವು ವಿದ್ಯಾರ್ಥಿಗಳು ಸ್ವಇಚ್ಛೆಯಿಂದಲೇ ಕೇಸರಿ ಶಾಲು ಧರಿಸಿ ಕಾಲೇಜಿನೊಳಗೆ ಪ್ರವೇಶಿಸಿದರೆ, ಕೆಲವು ವಿದ್ಯಾರ್ಥಿಗಳು ಶಾಲು ಧರಿಸಲು ನಿರಾಕರಿಸಿದರು. ಪೊಲೀಸರ ಕಟ್ಟುನಿಟ್ಟಿನ ಸೂಚನೆ ಇದ್ದಿದ್ದರಿಂದ ಕಾರ್ಯಕರ್ತರು ಯಾರಿಗೂ ಒತ್ತಾಯಪೂರ್ವಕವಾಗಿ ಶಾಲು ಹಾಕದೇ ತಾಳ್ಮೆಯಿಂದ ವರ್ತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂಪರ ಕಾರ್ಯಕರ್ತರಾದ ರಘು ಯಲ್ಲಕ್ಕನವರ್ ಮತ್ತು ಸಂಗಮೇಶ್, ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಶಿಸ್ತು ಮತ್ತು ಸಮಾನತೆಯನ್ನು ಹಾಳುಗೆಡವುತ್ತಿದೆ. ಹಿಜಾಬ್ಗೆ ನೀಡಿರುವ ಅನುಮತಿಯನ್ನು ತಕ್ಷಣವೇ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ನಮ್ಮ ಕೇಸರಿ ಶಾಲು ವಿತರಣೆ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.

