ಬೆಂಗಳೂರು: ಶಿಕ್ಷಕರಿಗೆ ಫೇಸ್, ಲೋಕೇಶನ್ ಹಾಜರಾತಿ ಕಡ್ಡಾಯಗೊಳಿಸಲಾಗಿದ್ದು, ಮೊನ್ನೆಯಿಂದಲೇ ಜಾರಿಯಾಗಿದೆ. ಶಾಲೆಗೆ ತಡವಾಗಿ ಬರುವ ಶಿಕ್ಷಕರಿಗೆ ಬ್ರೇಕ್ ಹಾಕಲಾಗಿದೆ. ಇನ್ನು ಒಂದೂವರೆ ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ಎಐ ಆಧಾರಿತ ಹಾಜರಾತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.
ಶಾಲೆಗೆ ತಡವಾಗಿ ಬರುವ ಶಿಕ್ಷಕರಿಗೆ ಬ್ರೇಕ್ ಬಿದ್ದಿದೆ. ರಾಜ್ಯ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಫೇಸ್, ಲೊಕೇಶನ್ ಆಧಾರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದ್ದು, ನಿರ್ದಿಷ್ಟ ಸಮಯ ಮೀರಿ ಶಾಲೆಗೆ ಹಾಜರಾದಲ್ಲಿ ಆ ದಿನ ಆಕಸ್ಮಿಕ ರಜೆ ಎಂದು ಪರಿಗಣಿಸಲಾಗುವುದು. ಇದಕ್ಕಾಗಿ ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್ ಆ್ಯಪ್ ರೂಪಿಸಲಾಗಿದೆ. ರಾಜ್ಯಾದ್ಯಂತ ಶುಕ್ರವಾರದಿಂದಲೇ ಈ ನಿಯಮ ಜಾರಿಯಾಗಿದ್ದು, ಸರ್ಕಾರಿ ಶಾಲೆ ಶಿಕ್ಷಕರು ನಿರ್ದಿಷ್ಟ ಅವಧಿ ಒಳಗೆ ಶಾಲೆಗೆ ಹಾಜರಾಗಿ ದಿನಕ್ಕೆ ಎರಡು ಸಲ ಲೊಕೇಶನ್, ಫೇಸ್ ಆಧಾರಿತ ಹಾಜರಾತಿ ಹಾಕಬೇಕು.
ತಂತ್ರಜ್ಞಾನ ಆಧಾರಿತ ಹಾಜರಾತಿ ನಿರ್ಲಕ್ಷಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ನಿಗದಿತ ಶಾಲಾ ಅವಧಿ ಮುಗಿಯುವ ಮೊದಲೇ ಚೆಕ್ ಔಟ್ ಆದಲ್ಲಿ ಕರ್ತವ್ಯ ಲೋಪ ಎಂದು ಪರಿಗಣಿಸಿ ಅರ್ಧ ದಿನ ರಜೆ ಕಡಿತಗೊಳಿಸಲಾಗುವುದು.
ಒಂದು ತಿಂಗಳಲ್ಲಿ ಮೂರು ಬಾರಿ ತಡವಾಗಿ ಬರುವುದು, ಬೇಗನೆ ಹೋಗುವುದು ಮಾಡಿದರೆ ಒಂದು ದಿನದ ಆಕಸ್ಮಿಕ ರಜೆ ಕಡಿತಗೊಳಿಸಲಾಗುವುದು. ಅನುಮತಿ ಇಲ್ಲದೆ, ಮುನ್ಸೂಚನೆ ಇಲ್ಲದೆ ಬೇಗನೆ ಚೆಕ್ ಔಟ್ ಆಗುವುದು ಸತತವಾಗಿ ಕಂಡುಬಂದಲ್ಲಿ ಅನಧಿಕೃತ ಗೈರುಹಾಜರಿ ಎಂದು ಪರಿಗಣಿಸಿ ನೋಟಿಸ್ ನೀಡಲಾಗುವುದು. ಸೇವಾ ವರದಿ ಮತ್ತು ವಾರ್ಷಿಕ ವೇತನ ಬಡ್ತಿಯ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಚಿತ್ರಕೃಪೆ: ಎಐ

