ಮೈಸೂರು: ಹೈಕಮಾಂಡ್ ತೀರ್ಮಾನದಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ನಡೆ ನಿಜಕ್ಕೂ ಮಾದರಿ, ಅವರು ನಮ್ಮ ಪ್ರಶ್ನಾತೀತ ನಾಯಕರು ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಬದಲಾವಣೆ ಇದೊಂದು ಪ್ರಕ್ರಿಯೆ. ಹೈಕಮಾಂಡ್ ತೀರ್ಮಾನದಂತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಈ ಹಿಂದೆಯೂ ಅವರು ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರು. ಅದರಂತೆ ನಡೆದುಕೊಂಡಿದ್ದಾರೆ. ಅವರ ನಡೆ ನಿಜಕ್ಕೂ ಮಾದರಿ ಎಂದಿದ್ದಾರೆ.
ಹೊಸ ಸಚಿವ ಸಂಪುಟದ ವಿಚಾರವಾಗಿ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ರಾಜಕೀಯದಲ್ಲಿ ಯಾವುದೂ ಪರ್ಮನೆಂಟ್ ಅಲ್ಲ, ಸದ್ಯಕ್ಕೆ ಆ ಚರ್ಚೆ ಅನಗತ್ಯ, ಮೊದಲು ಶಾಸಕಾಂಗ ಪಕ್ಷದ ಸಭೆ ಬಳಿಕ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆನಂತರ ಬೇರೆ ವಿಚಾರ. ಬಹುತೇಕ ಡಿ. ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಡಿಸಿಎಂ ರೇಸ್ನಲ್ಲಿ ಎಷ್ಟು ಜನರಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಇನ್ನೂ ಯಾವುದೇ ಚರ್ಚೆಗೆ ಬಂದಿಲ್ಲ. ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಸಚಿವರ ಬಗ್ಗೆ ಸಿಎಂ ಹಾಗೂ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.
ಏನೇನು ಆಗಬೇಕೋ ಅದು ಆಗುತ್ತದೆ. ಮುಖ್ಯವಾಗಿ ನಾವು ಜನರ ಪರವಾಗಿ ಕೆಲಸ ಮಾಡಬೇಕು. ಅವರ ಏಳಿಗೆಗೋಸ್ಕರ ಎಲ್ಲ ರೀತಿಯ ಕಾರ್ಯಕ್ರಮ ಕೊಟ್ಟಿರುವುದೇ ಕಾಂಗ್ರೆಸ್. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರೇ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಎಂದು ಹೇಳಿದ್ದಾರೆ.

