ಬೆಂಗಳೂರು: ಕನ್ನಡ ಚಿತ್ರರಂಗದ ಅಜಾತಶತ್ರು, ‘ರೆಬೆಲ್ ಸ್ಟಾರ್’ ಅಂಬರೀಶ್ ಅವರ ಜನ್ಮದಿನದಂದು ಅವರ ಪತ್ನಿ, ನಟಿ ಸುಮಲತಾ ಅಂಬರೀಶ್ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.ಅಂಬರೀಶ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ವ್ಯಕ್ತಿತ್ವ ಮತ್ತು ಅವರೊಂದಿಗಿನ ದಿನಗಳು ಇಂದಿಗೂ ಹಬ್ಬದಂತೆಯೇ ನೆನಪಿನಲ್ಲಿ ಉಳಿದಿವೆ ಎಂಬುದನ್ನು ಸುಮಲತಾ ಅವರು ವ್ಯಕ್ತಪಡಿಸಿದ್ದಾರೆ.
ರೆಬೆಲ್ ಸ್ಟಾರ್’ ಅಂಬರೀಶ್ ಅವರ ಜನ್ಮದಿನದ ಅಂಗವಾಗಿ ಪತ್ನಿ ಸುಮಲತಾ ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದು, “ಅಂಬರೀಶ್ ಅವರ ಬದುಕೇ ಒಂದು ಹಬ್ಬವಾಗಿತ್ತು” ಎಂದು ಸ್ಮರಿಸಿದ್ದಾರೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ವ್ಯಕ್ತಿತ್ವ, ಸ್ನೇಹಮಯಿ ನಗು ಮತ್ತು ಅಭಿಮಾನಿಗಳ ಮೇಲಿನ ಪ್ರೀತಿ ಇಂದಿಗೂ ಹಬ್ಬದ ಸಂಭ್ರಮದಂತೆಯೇ ಸ್ಮರಣೀಯವಾಗಿದೆ ಎಂದು ಸುಮಲತಾ ಅವರು ವ್ಯಕ್ತಪಡಿಸಿದ ಭಾವನೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಟ್ವೀಟ್ ನಲ್ಲಿಏನಿದೆ?
ಸುಮಲತಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಂಬರೀಶ್ ಅವರೊಂದಿಗಿನ ಅನ್ಯೋನ್ಯತೆಯನ್ನು ನೆನಪಿಸಿಕೊಳ್ಳುತ್ತಾ ಹೀಗೆ ಬರೆದುಕೊಂಡಿದ್ದಾರೆ:
ಸದಾ ನಿಮ್ಮ ನೆನಪಲ್ಲಿ, ಎಂದೆಂದಿಗೂ ನಮ್ಮ ಹೃದಯದಲ್ಲಿ…
ಇಂದು ಅವರ 74ನೇ ಜನ್ಮದಿನ. ಅಭಿಮಾನಿಗಳು ಪ್ರೀತಿಯಿಂದ ಕೊಂಡಾಡುವ “ರೆಬಲ್ ಸ್ಟಾರ್”, ತನ್ನ ಬಳಿ ಸಹಾಯ ಕೇಳಿ ಬಂದವರನ್ನು ಎಂದಿಗೂ ಬರಿಗೈಯ್ಯಲ್ಲಿ ಕಳುಹಿಸದ “ಕಲಿಯುಗದ ಕರ್ಣ”… ಈ ಎರಡೂ ಅಂಕಿತಗಳಿಗೆ ಪ್ರತಿರೂಪವಾಗಿದ್ದ ಅಂಬರೀಶ್ ಅವರ ಬದುಕೇ ಒಂದು ಹಬ್ಬವಾಗಿತ್ತು. ಅವರಲ್ಲಿದ್ದ ಆ ಕರುಣೆ, ಔದಾರ್ಯ, ಸದಾ ಹಸನ್ಮುಖಿ ವ್ಯಕ್ತಿತ್ವ ಮತ್ತು ಜನರ ಮೇಲಿದ್ದ ಪ್ರೀತಿಗೆ ಬೆಲೆ ಕಟ್ಟಲಾಗದು. ಅವರ ಮನಸ್ಸು ಸಮುದ್ರದಷ್ಟೇ ವಿಶಾಲವಾಗಿತ್ತು. ಕಣ್ಣೆದುರು ಬಂದ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುವ ದೊಡ್ಡ ಗುಣ ಅವರದ್ದಾಗಿತ್ತು. ಅವರ ಒಡನಾಟ ಸಿಕ್ಕಿದ್ದೇ ನಮ್ಮ ಪುಣ್ಯ ಅಂತ ಅದೆಷ್ಟೋ ಜನ ಇವತ್ತಿಗೂ ಹೆಮ್ಮೆಯಿಂದ ಹೇಳುತ್ತಾರೆ. ಇವತ್ತು ಈ ನಮ್ಮ ಕುಟುಂಬ ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ಅವರ ನೆರಳಲ್ಲಿ ಬೆಳೆದು, ಅವರೊಂದಿಗಿನ ಆಪ್ತ ಕ್ಷಣಗಳನ್ನು ಆನಂದಿಸಿದ ಅದೆಷ್ಟೋ ಆತ್ಮೀಯ ಸ್ನೇಹಿತರು ಇಂದಿಗೂ ಅವರನ್ನ ಸ್ಮರಿಸಿ, ಭಾವುಕರಾಗುತ್ತಾರೆ. ಅವರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಅವರು ಹಂಚಿದ ಆ ಪ್ರೀತಿ ಮತ್ತು ಬಿಟ್ಟುಹೋದ ಮರೆಯಲಾಗದ ನೆನಪುಗಳು ಅವರನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಜೀವಂತವಾಗಿಟ್ಟಿದೆ. ನಮ್ಮೆಲ್ಲರ ಮನಸ್ಸಿನಲ್ಲಿ ನೀವು ಸದಾ ಅಮರ… ಅನು ದಿನವೂ, ಅನುಕ್ಷಣವೂ ನಮ್ಮ ಕುಟುಂಬದ ಉಸಿರಾಗಿರುವ ನೀವೆಂದಿಗೂ ನಮ್ಮ ಹೆಮ್ಮೆಯ “ರೆಬೆಲ್ ಸ್ಟಾರ್”. ಎಂದು ಸುಮಲತಾ ಪೋಸ್ಟ್ ಹಂಚಿಕೊಂಡಿದ್ದಾರೆ.

