ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ಕಾಂಗ್ರೆಸ್ನ ಅಧಿಕಾರ ಹಸ್ತಾಂತರ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲು ಅಧಿಕೃತವಾಗಿ ತೀರ್ಮಾನಿಸಿದ್ದಾರೆ. ಇಂದು ಬೆಳಗ್ಗೆ ತಮ್ಮ ನಿವಾಸ ಕಾವೇರಿಯಲ್ಲಿ ಹಮ್ಮಿಕೊಂಡಿದ್ದ ಕೊನೆಯ ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಸಚಿವರ ಸಮ್ಮುಖದಲ್ಲೇ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಕೊನೆಯ ಬ್ರೇಕ್ ಫಾಸ್ಟ್ ಮೀಟಿಂಗ್: ಸಭೆಯಲ್ಲಿ ನಡೆದಿದ್ದೇನು?
ಸಿದ್ದರಾಮಯ್ಯ ಘೋಷಣೆ: “ನಾನು ಹೈಕಮಾಂಡ್ ಸೂಚನೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಮುಂದಿನ ಸಿಎಂ ಆಯ್ಕೆಯನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಜಿ. ಪರಮೇಶ್ವರ್ ಅವರನ್ನಾದರೂ ಮಾಡಲಿ ಅಥವಾ ಡಿ.ಕೆ. ಶಿವಕುಮಾರ್ ಅವರನ್ನಾದರೂ ಮಾಡಲಿ, ನಾನು ಯಾರೇ ಸಿಎಂ ಆದರೂ ಸಂಪೂರ್ಣ ಸಹಕಾರ ಕೊಡುತ್ತೇನೆ” ಎಂದು ಸಿದ್ದರಾಮಯ್ಯ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆರ್ಥಿಕತೆಯ ಪಾಠ ಮತ್ತು ಗ್ಯಾರಂಟಿ ಗಟ್ಟಿ: ಸಭೆಯಲ್ಲಿ ಸಚಿವರುಗಳಿಗೆ ರಾಜ್ಯದ ಆರ್ಥಿಕತೆಯ ಪಾಠ ಮಾಡಿರುವ ಸಿಎಂ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಬಾರದು, ಇದರಿಂದ ಆರ್ಥಿಕ ಸಮಸ್ಯೆ ಆಗುತ್ತದೆ ಎಂದು ತಲೆಕೆಡಿಸಿಕೊಳ್ಳಬೇಡಿ. ಗ್ಯಾರಂಟಿಗಳೇ ಕಾಂಗ್ರೆಸ್ ಮಾಡೆಲ್ ಎಂದು ಕಿವಿಮಾತು ಹೇಳಿದ್ದಾರೆ.
ಭಾವುಕರಾಗಿ ಕಣ್ಣೀರು ಹಾಕಿದ ಸಂತೋಷ್ ಲಾಡ್:
ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಡುತ್ತಿರುವ ವಿಷಯ ಕೇಳಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತೀವ್ರ ಭಾವುಕರಾಗಿದ್ದಾರೆ. ಮೀಟಿಂಗ್ ಮುಗಿಸಿ ಕಾರಿನಲ್ಲಿ ವಾಪಸ್ ತೆರಳುತ್ತಿದ್ದಾಗ ಅವರು ಕಣ್ಣೀರು ಹಾಕಿದ್ದು, ಮಾಧ್ಯಮಗಳಿಗೆ ಕೈಮುಗಿದು ಏನೂ ಮಾತನಾಡದೆ ಅಲ್ಲಿಂದ ಹೊರಟಿದ್ದಾರೆ.

