ಬೆಂಗಳೂರು: ಕರ್ನಾಟಕಕ್ಕೆ ಇಂದು ಬೇಕಿರುವುದು ಕೇವಲ ಮುಖ್ಯಮಂತ್ರಿ ಬದಲಾವಣೆ ಅಲ್ಲ… ಈ ಜನವಿರೋಧಿ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಬದಲಾವಣೆ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದಲ್ಲಿ ಆಡಳಿತ ಎನ್ನುವುದು ಸಂಪೂರ್ಣ ಮರೀಚಿಕೆಯಾಗಿದೆ. ಅಭಿವೃದ್ಧಿ, ಜನಸಮಸ್ಯೆ, ರೈತರ ಸಂಕಷ್ಟ, ಯುವಕರ ಭವಿಷ್ಯ, ಇವೆಲ್ಲವೂ ಗೌಣವಾಗಿದೆ, “ಕುರ್ಚಿ ಯಾರಿಗೆ?” ಎನ್ನುವ ಒಂದೇ ಪ್ರಶ್ನೆ ಸರ್ಕಾರವನ್ನು ನುಂಗಿಬಿಟ್ಟಿದೆ.
“ಅಧಿಕಾರ ಹಂಚಿಕೆ” ಎಂಬ ಪ್ರಹಸನ ಈಗ ಬೀದಿ ನಾಟಕದ ಮಟ್ಟಕ್ಕೆ ಇಳಿದಿದೆ. ಎಗ್ಗಿಲ್ಲದೆ ನಡೆಯುತ್ತಿರುವ ಕುರ್ಚಿ ಕದನ ಇಡೀ ಕರ್ನಾಟಕದ ಮಾನವನ್ನು ದೇಶದ ಮುಂದೆ ಹರಾಜು ಹಾಕುತ್ತಿದೆ. ಪ್ರಜಾಸೌಧದಲ್ಲಿ ಆಡಳಿತದ ಚರ್ಚೆ ಇಲ್ಲ… ಬರಿ ಅಧಿಕಾರದ ಲೆಕ್ಕಾಚಾರ ಮಾತ್ರ ಎನ್ನುವಂತಾಗಿದೆ! ಎಂದು ಕಿಡಿಕಾರಿದ್ದಾರೆ.
ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಾದ ಸತ್ಯ ಒಂದೇ. ಸಿದ್ದರಾಮಯ್ಯನವರೇ ಮುಂದುವರಿಯಲಿ, ಡಿ.ಕೆ. ಶಿವಕುಮಾರ್ ಬರಲಿ ಅಥವಾ ಮತ್ತೊಬ್ಬರನ್ನು ಕೂರಿಸಲಿ… ಈ ದಿವಾಳಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ನಯಾ ಪೈಸೆ ಪ್ರಯೋಜನವಿಲ್ಲ ಎಂದು ಕಿಡಿಕಾರಿದ್ದಾರೆ.
ಏಕೆಂದರೆ ಇವರಿಗೆ:
- ರಾಜ್ಯದ ಅಭಿವೃದ್ಧಿಯ ಬಗ್ಗೆ ದೃಷ್ಟಿಯಿಲ್ಲ.
- ರೈತರ ಕಣ್ಣೀರಿನ ಬಗ್ಗೆ ಕಾಳಜಿಯಿಲ್ಲ.
- ಯುವಕರ ಭವಿಷ್ಯದ ಬಗ್ಗೆ ಚಿಂತೆಯಿಲ್ಲ.
- ಜನರ ಸಮಸ್ಯೆಗಳ ಬಗ್ಗೆ ಉತ್ತರದಾಯಿತ್ವವೇ ಇಲ್ಲ.
ಇವರಿಗೆ ಇರುವುದು ಒಂದೇ ಅಜೆಂಡಾ:
ಕುರ್ಚಿ, ಅಧಿಕಾರ, ಲೂಟಿ ಮತ್ತು ಸ್ವಾರ್ಥ ರಾಜಕಾರಣ!
ಕರ್ನಾಟಕದ ಜನರ ಸಹನೆಯನ್ನು ಕಾಂಗ್ರೆಸ್ ದುರ್ಬಲತೆ ಎಂದು ಭಾವಿಸಬಾರದು. ಕನ್ನಡಿಗರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು ಒಳಜಗಳದಲ್ಲಿ ಮುಳುಗಿರುವ ಈ ಜನವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಗುಡುಗಿದ್ದಾರೆ.

