ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗಕ್ಕೆ ಮುಂದಾಗಿದ್ದಾರೆ. ನಾಳೆ ಗುರುವಾರ ಬೆಳಿಗ್ಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರು ನಡೆಸಿದ ಮ್ಯಾರಥಾನ್ ಸಭೆ ಬಳಿಕ ಅಧಿಕಾರ ಹಂಚಿಕೆ ಸೂತ್ರಕ್ಕೆ ಒಪ್ಪಿದ್ದ ಹಿನ್ನೆಲೆಯಲ್ಲಿ ಕೊಟ್ಟ ಮಾತಿನಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಾಹುಲ್ ಗಾಂಧಿ ಸಿದ್ದರಾಮಯ್ಯನವರಿಗೆ ಸೂಚಿಸಿದ್ದಾರೆ. ಅದರಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ನಲ್ಲಿ ಚಟುವಟಿಕೆ ಗರಿಗೆದರಿದೆ.
ಸಿದ್ದರಾಮಯ್ಯ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನುಉವ ಸುದ್ದಿ ಬೆನ್ನಲ್ಲೇ ಸಚಿವರು, ಶಾಸಕರು ಸಿಎಂ ಕಾವೇರಿ ನಿವಾಸಕ್ಕೆ ದೌಡಾಯಿಸಿದ್ದಾರೆ. ಸಚಿವರಾದ ಹೆಚ್.ಸಿ.ಮಹದೇವಪ್ಪ, ಜಮೀರ್ ಅಹ್ಮದ್, ಬೈರತಿ ಸುರೇಶ್, ಸುಧಾಕರ್, ಸಂತೋಷ್ ಲಾಡ್, ಶಾಸಕರಾದ ನಾಗೇಂದ್ರ, ಆರ್.ವಿ.ದೇಶಪಾಂಡೆ, ಕೆ.ವೈ.ನಂಜೇಗೌಡ, ಎಂಎಲ್ ಸಿ ರಾಜೇಂದ್ರ, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ಸಚಿವರು, ಶಾಸಕರು, ಎಂಎಲ್ ಸಿಗಳು ಸಿಎಂ ಭೇಟಿಯಾಗಿ ಚರ್ಚಿಸಿದರು.

