ನಿನ್ನೆ ( ಮೇ 26 ) ಧರಂಶಾಲಾ ಅಂಗಳದಲ್ಲಿ ನಡೆದ ಐಪಿಎಲ್ 2026ರ ಮೊದಲನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳಿಂದ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಈ ಮೂಲಕ ಕಳೆದ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯೂ ಸಹ ಫೈನಲು ತಲುಪಿದ್ದು, ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ತವಕದಲ್ಲಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಬೌಲಿಂಗ್ ಆರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿ ಗುಜರಾತ್ ಟೈಟನ್ಸ್‌ಗೆ 255 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ ಆರ್‌ಸಿಬಿ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್ ಟೈಟನ್ಸ್ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲ್‌ಔಟ್ ಆಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಅಜೇಯ 93 ರನ್ ಚಚ್ಚಿ ಅಬ್ಬರಿಸಿ ಗೆಲುವಿನ ರೂವಾರಿಯಾದ ನಾಯಕ ರಜತ್ ಪಟಿದಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಹೀಗೆ ಬಹು ಮುಖ್ಯವಾದ ಪಂದ್ಯದಲ್ಲಿ ಮತ್ತೊಮ್ಮೆ ಸಿಡಿದೆದ್ದ ರಜತ್ ಪಟಿದಾರ್ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಬಾರಿ ಫೈನಲ್‌ಗೆ ಕರೆತಂದ ಮಹಾ ದಾಖಲೆ ಬರೆದಿದ್ದಾರೆ. ಹೀಗೆ ಸತತವಾಗಿ ಎರಡು ಆವೃತ್ತಿಯಲ್ಲಿ ತಂಡವನ್ನು ಫೈನಲ್‌ಗೆ ತಂದ ಮಹಾ ದಾಖಲೆ ಮಾಡಿದ ಐಪಿಎಲ್‌ನ ಐದನೇ ನಾಯಕ ರಜತ್ ಪಟಿದಾರ್.
2010ರಲ್ಲಿ ಧೋನಿ ಹುಟ್ಟಿಸಿದ ಈ ದಾಖಲೆಯನ್ನು ರಜತ್ ಪಟಿದಾರ್‌ವರೆಗೆ ಒಟ್ಟು ಐವರು ಆಟಗಾರರು ಮಾಡಿದ್ದು, ಅವರ ಪಟ್ಟಿ ಮುಂದಿದೆ.
ಎಂಎಸ್ ಧೋನಿ – 2010, 2011
ರೋಹಿತ್ ಶರ್ಮಾ – 2019, 2020
ಹಾರ್ದಿಕ್ ಪಾಂಡ್ಯ – 2022, 2023
ಶ್ರೇಯಸ್ ಐಯ್ಯರ್ – 2024, 2025
ರಜತ್ ಪಟಿದಾರ್ – 2025, 2026

