ಧಾರವಾಡ : 2026-27 ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಪೂರ್ವದಲ್ಲಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಶಿಫಾರಸ್ಸು ಮಾಡಿರುವ ರೋಗ ನಿರೋಧಕ ಹಾಗೂ ಬರ ನಿರೋಧಕ ಸೂಕ್ತ ತಳಿಗಳ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿತ್ತುವ ಮೊದಲು ರೈತರು, ಬೀಜ ಹಾಗೂ ಮಣ್ಣಿನಿಂದ ಬರಬಹುದಾದ ರೋಗ ಹತೋಟಿ ಮಾಡಲು ಬೀಜೋಪಚಾರ ಕಡ್ಡಾಯವಾಗಿ ಮಾಡಬೇಕು. ಹಾಗೂ ಭೂಮಿಯಲ್ಲಿ ಸಾಕಷ್ಟು ತೇವಾಂಶ ಇರುವುದನ್ನು ಖಾತರಿಪಡಿಸಿಕೊಂಡು ಬಿತ್ತನೆ ಕೈಗೊಳ್ಳುವುದು ಸೂಕ್ತ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಪ್ರಮುಖವಾಗಿ ಗೋವಿನ ಜೋಳ ಬಿತ್ತನೆ ಮಾಡುತ್ತಿದ್ದು, ಇದಕ್ಕೆ ತಾಗುವ ಉರಿಜಿಂಗಿ ರೋಗ ನಿಯಂತ್ರಿಸಲು, ಪ್ರತಿ ಕಿ.ಗ್ರಾಂ ಬೀಜಕ್ಕೆ 25 ಗ್ರಾಂ ಅಝೋಸ್ಪಿರಿಲ್ಲಂ (ಎಸಿಡಿ 15 ಅಥವಾ ಎಸಿಡಿ 20 ತಳಿ) ಹಾಗೂ 6 ಗ್ರಾಂ. ಟ್ರೈಕೊಡರ್ಮಾ ಹಾರ್ಜೇನಿಯಮ್ ಶಿಲೀಂಧ್ರದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
ಕೇದಿಗೆ ರೋಗ ನಿಯಂತ್ರಣಕ್ಕೆ ಪ್ರತಿ ಕಿ. ಗ್ರಾಂ ಬೀಜಕ್ಕೆ 2ಗ್ರಾಂ. ಮೆಟಲಾಕ್ಸಿಲ್ (4%)+ ಮ್ಯಾಂಕೊಜೆಬ್(64%) ಎಮ್.ಜೆಡ್ 72 ಡಬ್ಲೂ.ಪಿ ಅಂತರವ್ಯಾಪಿ ಶಿಲೀಂಧ್ರನಾಶಕದಿಂದ ಉಪಚರಿಸಬೇಕು ಹಾಗೂ ರೋಗಗ್ರಸ್ಥ ಗಿಡಗಳನ್ನು ಬೇರುಸಹಿತ ಕಿತ್ತು ಸುಡಬೇಕೆಂದು ಅವರು ತಿಳಿಸಿದ್ದಾರೆ.
ಸೋಯಾಅವರೆ, ಹೆಸರು, ಹಾಗೂ ಶೇಂಗಾ ಬೆಳೆಗಳಿಗೆ ಯಾವುದೇ ರೋಗಬಾದೆ ಉಂಟಾಗದಂತೆ ಮುಂಜಾಗ್ರತೆ ವಹಿಸಲು, ಪ್ರತಿ ಕಿ.ಗ್ರಾಂ ಬಿತ್ತನೆ ಬೀಜವನ್ನು 3 ಗ್ರಾಂ ಥೈರಾಮ (75 ಡಬ್ಲೂಪಿ) ಅಥವಾ ಕ್ಯಾಪ್ಟನ್ (80 ಡಬ್ಲೂಪಿ) ಅಥವಾ ಕಾರ್ಬಾಕ್ಸಿನ್ ನಿಂದ (75 ಡಬ್ಲೂಪಿ) ಉಪಚರಿಸಬೇಕು. ನಂತರ 1 ಲೀ. ನೀರಿಗೆ 100 ಗ್ರಾಂ ಬೆಲ್ಲ ಹಾಕಿ ಕರಗಿಸಿ ದ್ರಾವಣವನ್ನು ತಯಾರಿಸಿಕೊಳ್ಳಬೇಕು, ಬಿತ್ತುವ ಬೀಜಗಳನ್ನು ಹರಡಿ ಅದರ ಮೇಲೆ ತಯಾರಿಸಿದ ಬೆಲ್ಲದ ದ್ರಾವಣವನ್ನು ಸರಿಯಾಗಿ ಎಲ್ಲ ಕಾಳುಗಳಿಗೆ ಹತ್ತುವಂತೆ ಸಿಂಪಡಿಸಿ, 10 ಗ್ರಾಂ ಟ್ರೈಕೊಡರ್ಮಾ, 10 ಗ್ರಾಂ ರೈಜೋಬಿಯಮ್ ಹಾಗೂ 10 ಗ್ರಾಂ ರಂಜಕ ಕರಗಿಸುವ ಅಣುಜೀವಿಯನ್ನು (ಪಿಎಸ್ಬಿ) ಬೀಜಕ್ಕೆ ಉಪಚರಿಸಿ ನೆರಳಿನಲ್ಲಿ ಒಣಗಿಸಿ ಬಿತ್ತಬೇಕೆಂದು ಅವರು ಹೇಳಿದ್ದಾರೆ.
ಉತ್ತಮ ಬೀಜ ಹಾಗೂ ಬೀಜೋಪಚಾರದ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಿ ಮಾಹಿತಿ, ಮಾರ್ಗದರ್ಶನ ಪಡೆದುಕೊಳ್ಳಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

