ಬೆಲ್ಜಿಯಂನ ಬಗೆನ್ಹೌಟ್ನಲ್ಲಿ ರೈಲು ಮತ್ತು ಶಾಲಾ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಬೆಲ್ಜಿಯಂನ ಬಗೆನ್ಹೌಟ್ ನಿಲ್ದಾಣದ ಬಳಿ, ಬ್ರಸೆಲ್ಸ್ನಿಂದ ಸುಮಾರು 23 ಕಿಲೋಮೀಟರ್ ದೂರದಲ್ಲಿ ಮಂಗಳವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ರೈಲ್ವೆ ಕ್ರಾಸಿಂಗ್ನಲ್ಲಿದ್ದ ಬ್ಯಾರಿಯರ್ಗಳು ಕೆಳಕ್ಕೆ ಇಳಿದಿದ್ದರೂ ಬಸ್ ಡಿಕ್ಕಿ ಹೊಡೆದಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಲ್ಜಿಯಂನ ಬಗೆನ್ಹೌಟ್ನಲ್ಲಿ ಶಾಲಾ ಬಸ್ ಮತ್ತು ರೈಲು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಹದಿಹರೆಯದವರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಬೆಲ್ಜಿಯಂನ ಪ್ರಸಾರ ಮಾಧ್ಯಮ ‘ಆರ್ಟಿಎಲ್’ (RTL) ವರದಿ ಮಾಡಿದೆ. ಸಾರಿಗೆ ಸಚಿವ ಜೀನ್-ಲ್ಯೂಕ್ ಕ್ರುಕ್ ಅವರ ಮಾಹಿತಿಯ ಪ್ರಕಾರ, ಮೃತರಲ್ಲಿ ಬಸ್ ಚಾಲಕ ಮತ್ತು ವಿದ್ಯಾರ್ಥಿಗಳೊಂದಿಗೆ ಇದ್ದ ಒಬ್ಬ ವಯಸ್ಕರೂ ಸೇರಿದ್ದಾರೆ. ಈ ಭೀಕರ ಅಪಘಾತದಲ್ಲಿ ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

