HomeIndiaವಾಣಿಜ್ಯ ನಗರಿ ಮುಂಬೈನಲ್ಲಿ ಇಂಧನ ಸಪ್ಲೈ ಬ್ರೇಕ್: ಪೆಟ್ರೋಲ್ ಸಿಗದೆ ವಾಹನ ಸವಾರರ ಪರದಾಟ!

ವಾಣಿಜ್ಯ ನಗರಿ ಮುಂಬೈನಲ್ಲಿ ಇಂಧನ ಸಪ್ಲೈ ಬ್ರೇಕ್: ಪೆಟ್ರೋಲ್ ಸಿಗದೆ ವಾಹನ ಸವಾರರ ಪರದಾಟ!

ಮುಂಬೈ ಮಹಾನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ತಲೆದೋರಿದೆ ಎಂಬ ವದಂತಿಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ. ನಗರದ ಕೆಲವು ಪ್ರಮುಖ ಪೆಟ್ರೋಲ್ ಬಂಕ್‌ಗಳು ದಿಢೀರ್ ಬಂದ್ ಆಗಿರುವುದು ಮತ್ತು ಇನ್ನು ಕೆಲವು ಕಡೆ ಕೇವಲ ಪ್ರೀಮಿಯಂ ಇಂಧನ ಮಾತ್ರ ಲಭ್ಯವಿರುವುದು ವಾಹನ ಸವಾರರಲ್ಲಿ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ನಿಯಮಿತ ಪೆಟ್ರೋಲ್ ಸಿಗದೆ ಬಂಕ್‌ಗಳಿಂದ ಬಂಕ್‌ಗಳಿಗೆ ಅಲೆಯಬೇಕಾದ ಪರಿಸ್ಥಿತಿ ಸೋಮವಾರ ಎದುರಾಗಿದೆ.

ನಗರದ ಸಯನ್ ಮತ್ತು ಮರೈನ್ ಲೈನ್ಸ್ ಸೇರಿದಂತೆ ಹಲವು ಭಾಗಗಳಲ್ಲಿ ಪೆಟ್ರೋಲ್ ಬಂಕ್‌ಗಳು ಮುಚ್ಚಲ್ಪಟ್ಟಿದ್ದವು. ಇನ್ನು ಕೆಲವು ಕಡೆ ಸಾಮಾನ್ಯ ಪೆಟ್ರೋಲ್ ಖಾಲಿಯಾಗಿದ್ದು, ಕೇವಲ ದುಬಾರಿ ಬೆಲೆಯ ಪವರ್ ಪೆಟ್ರೋಲ್ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಇದರಿಂದಾಗಿ ನಗರದಲ್ಲಿ ಇಂಧನ ಕೊರತೆ ಉಂಟಾಗಿದೆ ಎಂಬ ಸುದ್ದಿ ಹರಡಿ, ಸವಾರರು ಪೆಟ್ರೋಲ್ ಹಾಕಿಸಿಕೊಳ್ಳಲು ಮುಗಿಬಿದ್ದರು.

ಅಸಲಿ ಕಾರಣ ಬಿಚ್ಚಿಟ್ಟ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಗೊಂದಲದ ಕುರಿತು ಸ್ಪಷ್ಟನೆ ನೀಡಿರುವ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಚೇತನ್ ಮೋದಿ, ಮುಂಬೈನಲ್ಲಿ ಯಾವುದೇ ರೀತಿಯ ಪೆಟ್ರೋಲ್ ಅಥವಾ ಡೀಸೆಲ್ ಅಭಾವವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಯನ್ ಭಾಗದ ಬಂಕ್ ಮುಚ್ಚಲು ವಿದ್ಯುತ್ ಪೂರೈಕೆಯ ವ್ಯತ್ಯಯವೇ ಕಾರಣ ಎಂದು ಅವರು ತಿಳಿಸಿದ್ದಾರೆ.

ಮತ್ತೊಂದೆಡೆ, ಕೆಲವು ಬಂಕ್‌ಗಳಿಗೆ ಇಂಧನದ ಆರ್ಡರ್ ಮತ್ತು ಹಣ ಪಾವತಿ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಾಸವಾಗಿತ್ತು. ಇದರೊಂದಿಗೆ ರಿಫೈನರಿ ಕಾರ್ಯಾಚರಣೆಯ ಒಂದು ಭಾಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರಿಂದ ಕೆಲವು ಬಂಕ್‌ಗಳಿಗೆ ಸಕಾಲದಲ್ಲಿ ಇಂಧನ ತಲುಪಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಪೂರೈಕೆದಾರರು ಇಂಧನ ರವಾನಿಸುವ ಮುನ್ನ ಹೆಚ್ಚುವರಿ ಹಣ ಪಾವತಿಗೆ ಒತ್ತಾಯಿಸುತ್ತಿರುವುದು ಕೂಡ ಈ ತಾತ್ಕಾಲಿಕ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ವಿವರಿಸಿದ್ದಾರೆ.

ವಾಹನ ಸವಾರರ ಪರದಾಟ:

ಈ ತಾತ್ಕಾಲಿಕ ಪೂರೈಕೆ ವ್ಯತ್ಯಯದಿಂದಾಗಿ ಕಚೇರಿಗೆ ಹೋಗುವ ಸಾರ್ವಜನಿಕರು ಮತ್ತು ದೈನಂದಿನ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಅಂಧೇರಿಯಿಂದ ವಿಧಾನ ಭವನಕ್ಕೆ ಪ್ರಯಾಣಿಸುತ್ತಿದ್ದ ಕೃಷ್ಣ ಸಿಂಗ್ ಎಂಬುವವರು ಮಾತನಾಡಿ, ತಮಗೆ ದಾರಿಯುದ್ದಕ್ಕೂ ಪೆಟ್ರೋಲ್ ಸಿಗದೆ ಪರದಾಡಬೇಕಾಯಿತು. ಒಂದು ಬಂಕ್ ಸಂಪೂರ್ಣ ಬಂದ್ ಆಗಿದ್ದರೆ, ಮತ್ತೊಂದು ಕಡೆ ಕೇವಲ ಪವರ್ ಪೆಟ್ರೋಲ್ ಮಾತ್ರ ಇತ್ತು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ದೇಶದಲ್ಲಿ ಈಗಾಗಲೇ ಇಂಧನ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಗಳು ಮತ್ತು ವಾಹನ ಮಾಲೀಕರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮುಂಬೈನಂತಹ ಕೋಟ್ಯಂತರ ವಾಹನಗಳಿರುವ ಮೆಟ್ರೋ ನಗರದಲ್ಲಿ ಇಂಧನ ಪೂರೈಕೆಯಲ್ಲಿ ಸಣ್ಣ ವ್ಯತ್ಯಾಸವಾದರೂ ಅದು ಸಾರ್ವಜನಿಕರಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಆತಂಕ ಸೃಷ್ಟಿಸಲು ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular