ಕಾರವಾರ: ಹಲವು ದಿನಗಳಿಂದ ಶಾಂತವಾಗಿದ್ದ ಕರಾವಳಿ ಜಿಲ್ಲೆ ಮತ್ತೆ ಉದ್ವಿಗ್ನಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮುರಿನಕಟ್ಟೆ ವಿವಾದ ಮತ್ತೆ ಕಿಚ್ಚು ಹೊತ್ತಿಸಿದೆ.
ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಪುನರ್ ನಿರ್ಮಾಣ ಮಾಡಲಾಗಿದ್ದ ಮುರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಸಾವಿರಾರು ಯುವಕರು ಸೇರಿ ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಉದ್ವಿಗ್ನಗೊಂಡಿದೆ.
ಈ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಆರಂಭವಾದಾಗಿನಿಂದಲೂ ಈ ಮುರಿನಕಟ್ಟೆ ವಿವಾದದ ಕೇಂದ್ರಬಿಂದುವಾಗಿತ್ತು. ನೂರಾರು ವರ್ಷಗಳ ಇತಿಹಾಸ ಹಾಗೂ ಧಾರ್ಮಿಕ ನಂಬಿಕೆ ಹೊಂದಿದ್ದ ಈ ಸ್ಥಳವನ್ನು ಹೆದ್ದಾರಿಗಾಗಿ ಬಿಟ್ಟುಕೊಡಲಾಗಿತ್ತು. ರಸ್ತೆ ಅಗಲೀಕರಣದ ಬಳಿಕ, ಇದನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕೆಂದು ಒಂದು ವರ್ಗದವರು ಒತ್ತಾಯಿಸುತ್ತಿದ್ದರೆ, ಮೂಲ ಸ್ಥಳದಲ್ಲೇ ಮರುನಿರ್ಮಿಸಬೇಕು ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು.
ಹಲವಾರು ಬಾರಿ ಮನವಿ ಮಾಡಿದರೂ ಇಲಾಖೆಯು ಪುನರ್ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ, ಭಾನುವಾರ ಬೆಳಗ್ಗೆ ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು ಒಟ್ಟಾಗಿ ಕಟ್ಟೆಯನ್ನು ನಿರ್ಮಿಸಿದ್ದರು.
ಸಾರ್ವಜನಿಕ ಸ್ಥಳದಲ್ಲಿ ಕಟ್ಟೆ ನಿರ್ಮಾಣವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಮಜ್ಜಿಸೆ ಇಸ್ಲಾಹ್ ವ ತಂಝೀಮ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಉಪವಿಭಾಗಾಧಿಕಾರಿ ಜೆ. ಮಹೇಶ್ ಅವರು ಶಾಂತಿ ಸಭೆ ನಡೆಸಿ, ಇದು ಹೆದ್ದಾರಿಯ ಅತಿಕ್ರಮಿತ ಜಾಗ ಎಂದು ತಿಳಿಸಿದ್ದರು. ಅನ್ಯಕೋಮಿನ ಮುಖಂಡರು ಇದಕ್ಕೆ ಒಪ್ಪಿದರೂ, ರಾತ್ರಿ ವೇಳೆಗೆ ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿದೆ.
ಸಾವಿರಾರು ಯುವಕರು ಸ್ಥಳದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗುತ್ತಾ ಹೆದ್ದಾರಿ ಬಂದ್ ಮಾಡಿ ಧರಣಿ ಆರಂಭಿಸಿದರು. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಮತ್ತು ಡಿವೈ ಎಸ್ ಪಿ ಗಿರೀಶ್ ಯುವಕರನ್ನು ನಿಯಂತ್ರಿಸಲು ಮಾತುಕತೆ ನಡೆಸುತ್ತಿದ್ದಾಗಲೇ, ಕೆಲ ಯುವಕರು ಪೊಲೀಸರ ಎದುರೇ ಕಬ್ಬಿಣದ ಸಲಾಕೆಗಳಿಂದ ಮುರಿನಕಟ್ಟೆಯನ್ನು ಭಾಗಶಃ ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಸದ್ಯಕ್ಕೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 25ರಿಂದ ಮೇ 27ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಅಥವಾ ಅದಕ್ಕಿಂದ ಹೆಚ್ಚು ಜನರು ಗುಂಪುಗೂಡಬಾರದು ಎಂದು ಭಟ್ಕಳ ಎಸಿ ಮಹೇಶ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಕಟ್ತೆಚ್ಚರ ಕೈಗೊಳ್ಳಲಾಗಿದೆ.

