HomeInternationalವಿಮಾನ ಡಿಕ್ಕಿಯಾಗಿ ಛಿದ್ರಗೊಂಡ ಪ್ಯಾರಾಗ್ಲೈಡರ್:ಸಾವಿರಾರು ಅಡಿ ಎತ್ತರದಿಂದ ಬಿದ್ದ ಮಹಿಳೆ ಪವಾಡಸದೃಶ ಪಾರು!

ವಿಮಾನ ಡಿಕ್ಕಿಯಾಗಿ ಛಿದ್ರಗೊಂಡ ಪ್ಯಾರಾಗ್ಲೈಡರ್:ಸಾವಿರಾರು ಅಡಿ ಎತ್ತರದಿಂದ ಬಿದ್ದ ಮಹಿಳೆ ಪವಾಡಸದೃಶ ಪಾರು!

ವಿಯೆನ್ನಾ: ಆಸ್ಟ್ರಿಯಾದ ಸುಂದರ ಶ್ಮಿಟ್ಟೆನ್‌ಹೋಹೆ ಪರ್ವತ ಪ್ರದೇಶದ ಆಕಾಶದಲ್ಲಿ ಸಣ್ಣ ವಿಮಾನ ಹಾಗೂ ಪ್ಯಾರಾಗ್ಲೈಡರ್ ನಡುವೆ ಸಂಭವಿಸಿದ ಭೀಕರ ಅಪಘಾತದ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಕಾಶದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಮಹಿಳೆಯೊಬ್ಬರ ಪ್ಯಾರಾಗ್ಲೈಡರ್ ಕ್ಯಾನೋಪಿ (ಪ್ಯಾರಾಚೂಟ್ ತರಹದ ಭಾಗ) ವಿಮಾನದ ರೆಕ್ಕೆಗೆ ಸಿಲುಕಿ ಸಂಪೂರ್ಣವಾಗಿ ಹರಿದು ಹೋಗಿದ್ದು, ಆಕೆ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಮೇ 23 ರಂದು ಈ ಆಘಾತಕಾರಿ ಘಟನೆ ನಡೆದಿದ್ದು, 44 ವರ್ಷದ ಸಬ್ರಿನಾ ಎಂಬ ಮಹಿಳೆ ಆಸ್ಟ್ರಿಯಾದ ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದರು. ಹವಾಮಾನ ಸಂಪೂರ್ಣ ಸ್ವಚ್ಛವಾಗಿದ್ದರೂ ಸಹ, ಹಾರಾಟ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಬಳಸಲಾಗುವ ಸಣ್ಣ ವಿಮಾನವೊಂದು ದಿಢೀರ್ ಆಗಿ ಇವರ ಪ್ಯಾರಾಗ್ಲೈಡರ್‌ಗೆ ಡಿಕ್ಕಿ ಹೊಡೆದಿದೆ. ಸೆಸ್ನಾ 172 ಎಂದು ಗುರುತಿಸಲಾದ ಆ ವಿಮಾನದ ರೆಕ್ಕೆ ಮತ್ತು ಪ್ರೊಪೆಲ್ಲರ್ ಪ್ಯಾರಾಗ್ಲೈಡರ್‌ನ ಮೇಲ್ಭಾಗಕ್ಕೆ ಜೋರಾಗಿ ತಗುಲಿದ ಪರಿಣಾಮ, ಅದು ಸಂಪೂರ್ಣವಾಗಿ ಛಿದ್ರಗೊಂಡು ಮಹಿಳೆ ವೇಗವಾಗಿ ಭೂಮಿಯತ್ತ ಬೀಳಲಾರಂಭಿಸಿದ್ದಾರೆ.

ಎಮರ್ಜೆನ್ಸಿ ಪ್ಯಾರಾಚೂಟ್ ಮೂಲಕ ಪವಾಡಸದೃಶ ರಕ್ಷಣೆ: ವೇಗವಾಗಿ ಕೆಳಗೆ ಬೀಳುತ್ತಿದ್ದ ಸಬ್ರಿನಾ, ಗಾಬರಿಯಾಗದೆ ತಕ್ಷಣವೇ ತಮ್ಮ ಬಳಿ ಇದ್ದ ತುರ್ತು ರಕ್ಷಣಾ ಪ್ಯಾರಾಚೂಟ್ (ಎಮರ್ಜೆನ್ಸಿ ರಿಸರ್ವ್ ಪ್ಯಾರಾಚೂಟ್) ಅನ್ನು ತೆರೆಯಲು ತೀವ್ರವಾಗಿ ಹೋರಾಡಿದ್ದಾರೆ. ಅದೃಷ್ಟವಶಾತ್ ಭೂಮಿಗೆ ಅಪ್ಪಳಿಸುವ ಕೆಲವೇ ಕ್ಷಣಗಳ ಮುನ್ನ ಬ್ಯಾಕಪ್ ಚೂಟ್ ತೆರೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದು, ಹತ್ತಿರದಲ್ಲೇ ಇದ್ದ ಮರಗಳ ನಡುವೆ ಸುರಕ್ಷಿತವಾಗಿ ಇಳಿದಿದ್ದಾರೆ. ಈ ಭೀಕರ ಅಪಘಾತದಲ್ಲಿ ಅವರಿಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಭಯಾನಕ ವಿಡಿಯೋವನ್ನು ಸಬ್ರಿನಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾನು ಇಲ್ಲಿ ಕುಳಿತು ಈ ಪೋಸ್ಟ್ ಬರೆಯುತ್ತಿದ್ದೇನೆ ಎಂಬುದನ್ನು ನನಗೇ ನಂಬಲು ಸಾಧ್ಯವಾಗುತ್ತಿಲ್ಲ. ಕೆಲವು ತರಚಿದ ಗಾಯಗಳನ್ನು ಹೊರತುಪಡಿಸಿ ನನಗೆ ಬೇರೇನೂ ಆಗಿಲ್ಲ” ಎಂದು ಬರೆದುಕೊಂಡಿದ್ದಾರೆ. ಇನ್ನು ವಿಮಾನ ಚಲಾಯಿಸುತ್ತಿದ್ದ 28 ವರ್ಷದ ಪೈಲಟ್ ಕೂಡ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ತಪ್ಪಿದಂತಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular