ಬೆಂಗಳೂರು: ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ ವಿತರಣೆಗೆ ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಪದ್ಮಿನಿ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ ಫಲಿತಾಂಶದ ದತ್ತಾಂಶ ಬಳಸಿಕೊಂಡು ಸ್ವಯಂ ಚಾಲಿತವಾಗಿ ಡಿಜಿಟಲ್ ವರ್ಗಾವಣೆ ಪತ್ರ ರಚಿಸಲಾಗಿದೆ. ಡಿಜಿ ಲಾಕರ್ ಮೂಲಕ ವಿದ್ಯಾರ್ಥಿಗಳಿಗೆ ಇದು ಲಭ್ಯವಾಗಲಿದೆ.
ಹೊಸ ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರದಲ್ಲಿ ಹಳೆಯ ನಮೂನೆಯಲ್ಲಿದ್ದ ಶುಲ್ಕ ಬಾಕಿ, ವಿದ್ಯಾರ್ಥಿವೇತನ, ಹಾಜರಾತಿ ಲೆಕ್ಕಾಚಾರದ ಮಾಹಿತಿ ಕೈ ಬಿಡಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ಜೋಡಣೆಗಾಗಿ ಸ್ಯಾಟ್ಸ್ ಸಂಖ್ಯೆಯ ಜೊತೆಗೆ ಪರೀಕ್ಷಾ ನೋಂದಣಿ ಸಂಖ್ಯೆ ಅಪಾರ್ ಐಡಿಯನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದೆ.
ಚಿತ್ರಕೃಪೆ: ಎಐ

