ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 60,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳಿಗೆ ಪ್ರತಿಯಾಗಿ 2026 -27 ನೇ ಸಾಲಿನಲ್ಲಿ 51,000 ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ನಡುವೆ ಸರ್ಕಾರ ಉದ್ದೇಶಿಸಿರುವ 15,000 ಖಾಯಂ ಶಿಕ್ಷಕರ ನೇಮಕಾತಿ ವಿಳಂಬವಾಗಿರುವುದರಿಂದ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಮೀಸಲಾತಿ ಮತ್ತು ಒಳ ಮೀಸಲಾತಿ ಕಲ್ಪಿಸಬೇಕೆಂದು ಅಭ್ಯರ್ಥಿಗಳು ಆಗ್ರಹಪಡಿಸಿದ್ದಾರೆ.
ಪ್ರತಿ ವರ್ಷದಂತೆ ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶ ನೀಡಲಾಗಿದೆ. 15 ಸಾವಿರ ಶಿಕ್ಷಕರ ನೇಮಕಾತಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದರೂ, ಹಣಕಾಸು ಇಲಾಖೆ ಒಪ್ಪಿಗೆ, ಒಳ ಮೀಸಲಾತಿ ನಿಗದಿ ಮತ್ತಿತರ ಕಾರಣಗಳಿಂದ ಸದ್ಯಕ್ಕೆ ನೇಮಕಾತಿ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಹೀಗಾಗಿ ಸರ್ಕಾರ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶಿಸಿದ್ದು, ಇದರಲ್ಲಿಯೇ ಮೀಸಲಾತಿ, ಒಳಮಿಸಲಾತಿ ಕಲ್ಪಿಸಬೇಕೆಂಬುದು ಅಭ್ಯರ್ಥಿಗಳ ಆಗ್ರಹವಾಗಿದೆ.

