ಹೈದರಾಬಾದ್: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಅವಘಡಗಳು ಸಂಭವಿಸುತ್ತಿದ್ದರೆ, ಪಕ್ಕದ ರಾಜ್ಯ ಆಂಧ್ರ, ತೆಲಂಗಾಣದಲ್ಲಿ ರಣ ಬಿಸಿಲ ಝಳಕ್ಕೆ ಜನರು ಕಂಗಾಲಾಗಿದ್ದಾರೆ. ತಾಪಮಾನ ಹೆಚ್ಚಳದಿಂದಾಗಿ ಹೋಟ್ ಸ್ಟ್ರೋಕ್ ಗೆ ಸಾಅವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ತೆಲಂಗಾಣದಲ್ಲಿ ಬಿಸಿಲಾಘಾತಕ್ಕೆ ಈವರೆಗೆ 51 ಜನರು ಮೃತಪಟ್ಟಿದ್ದಾರೆ. ಸುಡು ಬಿಸಿಲಿನಿಂದಾಗಿ ಜನರು ತತ್ತರಿಸಿ ಹೋಗುತ್ತಿದ್ದು, ವಿಪರೀತ ಬಿಸಿಗಾಳಿ, ಸೆಖೆಯಿಂದಾಗಿ ಸಾವು-ನೋವು ಹೆಚ್ಚುತ್ತಿದೆ.
ವಾರಂಗಲ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 23 ಜನರು ಉಷ್ಣಾಘಾತಕ್ಕೆ ಸಾವನ್ನಪ್ಪಿದ್ದಾರೆ. ಕರೀಂನಗರ ಜಿಲ್ಲೆಯಲ್ಲಿ 11 ಜನರು, ಖಮ್ಮಂನಲ್ಲಿ 7, ಆದಿಲಾಬಾದ್ ಮತ್ತು ನಲ್ಗೊಂಡದಲ್ಲಿ ತಲಾ ಐವರು ಅಸುನೀಗಿದ್ದಾರೆ. ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಓರ್ವ ವ್ಯಕ್ತಿ ಬಿಸಿಲಿನ ಹೊಡೆತದಿಂದ ಬಳಲಿ ಸಾವನ್ನಪ್ಪಿದ್ದಾರೆ.
ರಣ ಬಿಸಿಲಿನಿಂದಾಗಿ ಮೃತ ಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಘೋಷಿಸಿದ್ದಾರೆ.
ತಾಪಮಾಅನ ಹೆಚ್ಚಳದಿಂದ ಸಾವು ಸಂಭವಿಸುತ್ತಿರುವ ಬೆನ್ನಲ್ಲೇ ಮುಂಜಾಗ್ರತಾ ಕ್ರಮಗಳ ಕುರಿತ ಚರ್ಚೆಗೆ ಸಚಿವ ಶ್ರೀನಿವಾಸ ರೆಡ್ಡಿ ಸಚಿವಾಲಯದಲ್ಲಿ ತುರ್ತು ಸಭೆ ನಡೆಸಿದರು. ಅತಿ ಹೆಚ್ಚು ತಾಪಮಾನ ದಾಖಲಾಗುವ ತಾಲೂಕುಗಳು ಮತ್ತು ಗ್ರಾಮಗಳನ್ನು ಗುರುತಿಸಬೇಕು ಮತ್ತು ಅಲ್ಲಿನ ಜನರಿಗೆ ಮುನ್ನೆಚ್ಚಚ್ಚರಿಕೆಗಳನ್ನು ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಸ್ ನಿಲ್ದಾಣಗಳು, ಮಾರುಕಟ್ಟೆಗಳು, ಮುಖ್ಯ ರಸ್ತೆಗಳು, ಕಾರ್ಮಿಕರು ಹೆಚ್ಚು ಕೆಲಸ ಮಾಡುವ ಪ್ರದೇಶಗಳು ಮತ್ತು ಜನರು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ತಣ್ಣೀರು, ಮಜ್ಜಿಗೆ ಮತ್ತು ORS ಪ್ಯಾಕೆಟ್ಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಸಚಿವರು ನಿರ್ದೇಶನ ನೀಡಿದರು.
ಶಾಖದ ಅಲೆಗಳ ಪರಿಸ್ಥಿತಿಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಬೇಕು. ಎಲ್ಲಾ ಗ್ರಾಮ ಮತ್ತು ಮಂಡಲ ಮಟ್ಟದ ಸಿಬ್ಬಂದಿ ಕ್ಷೇತ್ರ ಮಟ್ಟದಲ್ಲಿರಬೇಕು. ಬಿಸಿಲಿನ ಹೊಡೆತದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಸೇವೆಗಳು ಸಿದ್ಧವಾಗಿರಬೇಕು. ಜನರೊಂದಿಗೆ ಇತರ ಜೀವಿಗಳನ್ನು ರಕ್ಷಿಸುವುದೂ ನಮ್ಮ ಜವಾಬ್ದಾರಿಯಾಗಿದೆ. ಪ್ರಾಣಿ, ಪಕ್ಷಿಗಳಿಗೆ ನೀರಿನ ಟ್ಯಾಂಕ್ಗಳು ಮತ್ತು ಮಣ್ಣಿನ ಮಡಕೆಗಳ ಮೂಲಕ ಕುಡಿಯುವ ನೀರು ಒದಗಿಸುವಂತೆ ಸಚಿವರು ತಿಳಿಸಿದರು.
ರಾಜ್ಯಾದ್ಯಂತ ತಾಪಮಾನ ಅಪಾಯಕಾರಿಯಾಗಿ ಹೆಚ್ಚಾಗುತ್ತಿದೆ. ಮಧ್ಯಾಹ್ನದ ವೇಳೆ ಹೊರ ಹೋಗುವುದನ್ನು ತಪ್ಪಿಸಿ. ತೀರಾ ಅವಶ್ಯ ಅನ್ನಿಸಿದರೆ ಮಾತ್ರ ಹೋಗಿ. ಸಾಕಷ್ಟು ನೀರು ಸೇವಿಸಿ. ಬಿಸಿಲಿಗೆ ಒಡ್ಡಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ತೆಲಂಗಾಣದ 15 ಜಿಲ್ಲೆಗಳಲ್ಲಿ 45 ಡಿಗ್ರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಕೊಥಗುಡೆಮ್ ಜಿಲ್ಲೆಯಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ 46.3 ಡಿಗ್ರಿ ದಾಖಲಾಗಿದೆ.
ಇನ್ನು ಆಂಧ್ರ ಪ್ರದೇಶದಲ್ಲಿಯೂ ಬಿಸಿಲ ಝಳಕ್ಕೆ ಒಂದೇ ದಿನದಲ್ಲಿ 16 ಜನರು ಬಲಿಯಾಗಿದ್ದಾರೆ. 12 ಜನರು ಎನ್ಟಿಆರ್, ಕೃಷ್ಣ ಮತ್ತು ಗುಂಟೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೃತಪಟ್ತಿದ್ದಾರೆ ಎಂದು ವರದಿಯಾಗಿದೆ.

